Site icon Vistara News

ನೆದರ್ಲೆಂಡ್ಸ್​ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಇದೆಯೇ? ದ್ರಾವಿಡ್​ ಹೇಳಿದ್ದೇನು?

Rahul Dravid

ಬೆಂಗಳೂರು: ನೆದರ್ಲೆಂಡ್ಸ್(IND vs NED)​ ವಿರುದ್ಧ ಇಂದು ನಡೆಯುವ ಪಂದ್ಯಕ್ಕೆ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು ಎಂಬ ವರದಿಯನ್ನು ಕೋಚ್​ ರಾಹುಲ್​ ದ್ರಾವಿಡ್​(Rahul Dravid) ತಳ್ಳಿ ಹಾಕಿದ್ದಾರೆ. ಈಗಾಗಲೇ ಆಟಗಾರರು ಆರು ದಿನಗಳ ವಿಶ್ರಾಂತಿ ಪಡೆದಿದ್ದಾರೆ ಎಂದು ಹೇಳುವ ಮೂಲಕ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಪಂದ್ಯಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್​, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಕಳೆದ ಪಂದ್ಯದ ಬಳಿಕ ಆರು ದಿನಗಳ ರಜೆ ಅನುಭವಿಸಿದ್ದೇವೆ. ಆದ್ದರಿಂದ ಎಲ್ಲ ಆಟಗಾರರು ಉತ್ತಮ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆಟಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಂಡದ ಆಟಗಾರರಿಗೆ ವಿಶ್ರಾಂತಿಯ ಅಗತ್ಯ ಇಲ್ಲ. ಸೆಮಿಫೈನಲ್​ಗೆ ಒಂದು ಪಂದ್ಯ ಬಾಕಿ ಇರುವಾಗ ತಂಡದಲ್ಲಿ ಬದಲಾವಣೆ ನಿರ್ಧಾರ ಸರಿ ಇರುವುದಿಲ್ಲ. ತಂಡ ಸಂಪೂರ್ಣ ಫಿಟ್​ ಆಗಿದೆ ಹೀಗಾಗಿ ಯಾವುದೇ ಬದಲಾವಣೆ ಅಗತ್ಯ ಕಂಡು ಬರುವುದಿಲ್ಲ” ಎಂದಿದ್ದಾರೆ. ಈ ಮೂಲಕ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಸಿದ್ಧ್​ ಕೃಷ್ಣಗೆ ಅವಕಾಶ ಸಿಗಲಿದೆಯಾ?

ಪಾದದ ಗಾಯಕ್ಕೆ ತುತ್ತಾಗಿ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಬದಲಾಗಿ ತಂಡ ಸೇರಿದ ಕನ್ನಡಿಗ​ ಪ್ರಸಿದ್ಧ್​ ಕೃಷ್ಣ ಅವರಿಗೆ ನೆದರ್ಲೆಂಡ್ಸ್​ ವಿರುದ್ಧ ಅವಕಾಶ ಸಿಗಲಿದೆಯಾ ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ದ್ರಾವಿಡ್​ “ನಾವು ಈಗ ಟೂರ್ನಿಯ ಅಂತಿಮ ಹಂತಕ್ಕೆ ತಲುಪಿದ್ದೇವೆ. ಈ ಹಂತದ ವರೆಗೆ ಆಡಿದ ಪ್ಲೇಯಿಂಗ್​ ಇಲೆವೆನ್​ನ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗಿದ್ದಾರೆ. ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನ ನಿರೀಕ್ಷಿಸುತ್ತೇವೆ ಎಂದು ಹೇಳುವ ಮೂಲಕ ಪ್ರಸಿದ್ಧ್​ ಕೃಷ್ಣಗೆ ಅವಕಾಶ ಕಷ್ಟ ಎನ್ನುವ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ IND vs NED: ಭಾರತ-ನೆದರ್ಲೆಂಡ್ಸ್‌ ಪಂದ್ಯ; ಬೆಂಗಳೂರಿನ ಹಲವೆಡೆ ವಾಹನ ನಿಲುಗಡೆ ನಿಷೇಧ

“ನಮ್ಮ ತಂಡ ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ಎಂಟು ಸ್ಥಳಗಳಲ್ಲಿ ಆಡಿದ್ದೇವೆ. ಇದು ನಮ್ಮ ಒಂಬತ್ತನೇ ಸ್ಥಳವಾಗಿದೆ. ರೋಹಿತ್ ಶರ್ಮಾ ಕೆಲವು ಕಠಿಣ ಪಿಚ್​ಗಳಲ್ಲಿಯೂ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ವಿರಾಟ್​ ಕೊಹ್ಲಿ, ಕೆ.ಎಲ್​ ರಾಹುಲ್​ ಶುಭಮನ್​ ಗಿಲ್​ ಸೇರಿ ಎಲ್ಲ ಆಟಗಾರರು ಶ್ರೇಷ್ಠ ಪ್ರದರ್ಶನ ತೋರುತ್ತಿರುವುದು ತಂಡ ಕಪ್​ ಗೆಲ್ಲುವ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ” ಎಂದರು.

ಸಂಭಾವ್ಯ ತಂಡ

ಭಾರತ: ರೋಹಿತ್​ ಶರ್ಮ(ನಾಯಕ), ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಕುಲ್​ದೀಪ್​ ಯಾದವ್​, ರವೀಂದ್ರ ಜಡೇಜಾ, ಸೂರ್ಯಕುಮಾರ್​ ಯಾದವ್​, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​, ಜಸ್​ಪ್ರೀತ್​ ಬುಮ್ರಾ.

ನೆದರ್ಲೆಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ ಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

Exit mobile version