ರಾವಲ್ಪಿಂಡಿ : ಭಾರತ ತಂಡ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಹೋಗುವ ವಿಚಾರ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ಏಕ ದಿನ ಕ್ರಿಕೆಟ್ ವಿಶ್ವ ಕಪ್‌ಗಾಗಿ ಭಾರತಕ್ಕೆ ಬರುವುದರ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ನಿರಂತರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹೇಳಿಕೆಗಳಿಂದಾಗಿ ಈ ವಿಷಯ ವಿವಾದವಾಗಿ ಮಾರ್ಪಟ್ಟಿದೆ. ಇದೀಗ ಅವರು ಯಾರಾದರೂ ಆ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಬಿಸಿಸಿಐ ಉತ್ತರ ಕೊಡಬೇಕು ಎಂದು ಹೇಳಲು ಆರಂಭಿಸಿದ್ದಾರೆ!
ರಾವಲ್ಪಿಂಡಿಯಲ್ಲಿ ಸೋಮವಾರ ಸಮಾಪ್ತಿಗೊಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ವೇಳೆ ರಮೀಜ್ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿವಾದವನ್ನು ಆರಂಭಿಸಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ). ಹೀಗಾಗಿ ಅವರೇ ಇದನ್ನು ಕೊನೆಗಾಣಿಸಬೇಕು ಹಾಗೂ ಸ್ಪಷ್ಟ ಉತ್ತರ ಕೊಡಬೇಕು ಎಂಬುದಾಗಿ ಅವರು ಹೇಳಿಕೆ ನೀಡಿ, ಬಿಸಿಸಿಐ ಮೇಲೆ ಗೂಬೆ ಕೂರಿಸಲು ಶುರು ಮಾಡಿದ್ದಾರೆ.
ಭಾರತ ತಂಡದ ಪಾಕಿಸ್ತಾನಕ್ಕೆ ಬರದೇ ಹೋದರೆ, ಏಷ್ಯಾ ಕಪ್ ಅತಿಥ್ಯವನ್ನು ವಾಪಸ್ ಕೊಡುತ್ತೇವೆ ಎಂಬ ಮಾತನ್ನು ಇದೇ ವೇಳೆ ಪುನರುಚ್ಚರಿಸಿದರು. ಅಲ್ಲದೆ, ಮುಂದಿನ ವಿಶ್ವ ಕಪ್‌ಗೆ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದು ಕೂಡ ಸಾಧ್ಯವಿಲ್ಲ ಎಂಬುದಾಗಿಯೂ ಹೇಳಿದರು.
ಇದೇ ವೇಳೆ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳು ನಡೆಯಬೇಕು ಎಂಬುದಾಗಿಯೂ ಅಭಿಪ್ರಾಯಪಟ್ಟಿದ್ದಾರೆ. ಈ ಎರಡೂ ತಂಡಗಳ ನಡುವಿನ ಪಂದ್ಯಕ್ಕಿರುವ ಜನಪ್ರಿಯತೆಯೇ ಅದಕ್ಕೆ ಸಾಕ್ಷಿ ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್ ಸರಣಿಯೂ ನಡೆಯಬೇಕು ಎಂಬುದಾಗಿಯೂ ಹೇಳಿದ್ದಾರೆ.
ಇರಾನ್ ಹಾಗೂ ಅಮೆರಿಕ ನಡುವೆ ರಾಜತಾಂತ್ರಿಕವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳು ಇವೆ. ಅದರೆ, ಆ ಎರಡೂ ದೇಶಗಳು ಫುಟ್ಬಾಲ್ ಆಡುತ್ತಿವೆ. ಅಮೆರಿಕ ತಂಡ ಇರಾನ್‌ಗೆ ಫುಟ್ಬಾಲ್ ಆಡಲು ಹೋಗುತ್ತಿದೆ ಎಂಬುದಾಗಿ ರಮೀಜ್ ಹೇಳಿದ್ದಾರೆ.
ಬಿಸಿಸಿಐ ಇದೇ ರೀತಿಯ ವರ್ತನೆ ಮುಂದುವರಿಸಿದರೆ, ಪಾಕ್ ಸರಕಾರವೂ ಭದ್ರತೆಯ ನೆಪ ಹೇಳಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪದು ಎಂಬುದಾಗಿ ರಮೀಜ್ ತಿಳಿಸಿದ್ದಾರೆ.
ಇದನ್ನೂ ಓದಿ | Autobiography | ರಮೀಜ್ ರಾಜಾ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು, ಯಾಕೆಂದರೆ ಅವರಪ್ಪ ಪೊಲೀಸ್ ಕಮಿಷನರ್!