ಬೆಂಗಳೂರು: ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಐಪಿಎಲ್ 2024 ರಲ್ಲಿ ಮುಂದುವರಿಯಲಿದೆ ಎಂಬುದಾಗಿ ವರದಿಯಾಗಿದೆ. ಫ್ರಾಂಚೈಸಿಗಳೊಂದಿಗೆ ಚರ್ಚಿಸಿದ ನಂತರ “ಸೂಪರ್ ಸಬ್” ಆಟಗಾರನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಈ ಹಿಂದೆ ನಿರ್ಧರಿಸಿತ್ತು. ವಿದೇಶಿ ತರಬೇತುದಾರರು ಮತ್ತು ನಾಯಕರು ಇದನ್ನು ವಿರೋಧಿಸಿದ್ದರೆ ಭಾರತೀಯ ಆಟಗಾರರು ಅದನ್ನು ಉತ್ತವಾಗಿ ಸ್ವೀಕರಿಸಿದ್ದರು. ಹೀಗಾಗಿ ಇದು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂದುವರಿಯಿತು. ಈಗ, ಇದು ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದಿನ ಆವೃತ್ತಿಯಲ್ಲೂ (IPL 2024) ಮುಂದುವರಿಯುತ್ತದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2023 ರಲ್ಲಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬದಲಾಯಿಸಲಾಯಿತು, ಪಂದ್ಯದ ಯಾವುದೇ ಸಮಯದಲ್ಲಿ ತಂಡಗಳಿಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಕಳೆದ ಆವೃತ್ತಿಯಲ್ಲಿ ಇದನ್ನು 14ನೇ ಓವರ್ಗೆ ಸೀಮಿತಗೊಳಿಸಲಾಗಿತ್ತು. ಇದೀಗ 2ನೇ ಆವೃತ್ತಿಯಲ್ಲಿ (ಡಬ್ಲ್ಯುಪಿಎಲ್ 2024) ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಜಾರಿಗೆ ಬರುವ ಸಾಧ್ಯತೆ ಇದೆ.
“ಹೌದು, ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಮುಂದಿನ ಋತುವಿನಲ್ಲಿ ಮುಂದುವರಿಯುತ್ತದೆ. ನಾವು ನಾಯಕರು ಮತ್ತು ತರಬೇತುದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ. ಇದು ಪಂದ್ಯಕ್ಕೆ ಹೊಸ ಉತ್ಸಾಹ ನೀಡುತ್ತದೆ . ಇದು ಆಯ್ಕೆಯ ವಿಷಯದಲ್ಲಿ ತಂಡಗಳಿಗೆ ಸರಳ ಅವಕಾ ನೀಡುತ್ತದೆ”ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ICC World Cup 2023 : ಪಾಕ್ ತಂಡದ ವೈಫಲ್ಯವನ್ನು ಲೇವಡಿ ಮಾಡಿದ ಮಾಜಿ ಕ್ರಿಕೆಟಿಗ
ಆಕ್ಷೇಪಗಳಿವೆ
ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಎಲ್ಲರೂ ಸಂತೋಷವಾಗಿಲ್ಲ “ಇದು ಕೆಲವೊಮ್ಮೆ ಗೊಂದಲಮಯವಾಗಬಹುದು” ಎಂದು ಡೇವಿಡ್ ವಾರ್ನರ್ ಈ ಹಿಂದೆ ಹೇಳಿದ್ದರು. ನಿಯಮವು ಆಲ್ರೌಂಡರ್ ಪಾತ್ರವನ್ನು ಆತಂಕಕ್ಕೆ ತಳ್ಳುತ್ತದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದರು. ಎರಡು ಕೌಶಲ್ಯ (ಬ್ಯಾಟಿಂಗ್ ಮತ್ತು ಬೌಲಿಂಗ್) ಹೊಂದಿರುವವರು ಹರಾಜಿನ ಸಮಯದಲ್ಲಿ ಬಿಡ್ಡಿಂಗ್ ಯುದ್ಧಗಳನ್ನು ನಡೆಸುತ್ತಾರೆ. ಸ್ಯಾಮ್ ಕರ್ರನ್, ಕ್ಯಾಮರೂನ್ ಗ್ರೀನ್ ಮತ್ತು ಬೆನ್ ಸ್ಟೋಕ್ಸ್ ಕಳೆದ ಹರಾಜಿನಲ್ಲಿ ತಲಾ 14 ಕೋಟಿ ರೂ.ಗೆ ಮಾರಾಟವಾಗಿದ್ದರು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಈ ಅವಕಾಶವನ್ನು ಕಡಿಮೆ ಮಾಡಲಿದೆ.
ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಎಂದರೇನು?
ಐಪಿಎಲ್ ನಿಯಮ ಪ್ರಕಾರ, ಒಂದು ತಂಡವು ಪ್ಲೇಯಿಂಗ್ ಇಲೆವೆನ್ನಲ್ಲಿ ಹೆಸರಿಸಲಾದ ಇನ್ನೊಬ್ಬ ಆಟಗಾರನ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ತರಬಹುದು. ಆದರೆ ಹೊರಗೆ ಹೋದ ಆಟಗಾರನು ಆಟ ಮುಂದುವರಿಸಲು ಸಾಧ್ಯವಿಲ್ಲ. ಇದಲ್ಲದೆ, ತಂಡವು ಭಾರತೀಯ ಆಟಗಾರನನ್ನು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು. ಆದರೆ, 11ರ ಬಳಗದಲ್ಲಿ ನಾಲ್ಕಕ್ಕಿಂತ ಕಡಿಮೆ ವಿದೇಶಿ ಆಟಗಾರರು ಇದ್ದರೆ ವಿದೇಶಿಯರನ್ನೂ ಬಳಸಬಹುದು.
- ಪಂದ್ಯ ಆರಂಭಕ್ಕೂ ಮುನ್ನ ತಂಡಗಳು ಪ್ಲೇಯಿಂಗ್ ಇಲೆವೆನ್ ಹೊರತುಪಡಿಸಿ ಐದು ಬದಲಿ ಆಟಗಾರರನ್ನು ಘೋಷಿಸಬೇಕು.
- ಒಂದು ತಂಡವು ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು, ವಿಕೆಟ್ ಪತನದ ನಂತರ ಅಥವಾ ಓವರ್ ನ ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ತರಬಹುದು.
- ಗಾಯದ ಸಂದರ್ಭದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಬಹುದು. ಆದರೆ ಗಾಯಗೊಂಡ ಆಟಗಾರ ಆ ಬಳಿಕ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಿಲ್ಲ.
- ಬದಲಿ ಆಟಗಾರನು ತಾನು ಬದಲಾಯಿಸುತ್ತಿರುವ ಆಟಗಾರನನ್ನು ಲೆಕ್ಕಿಸದೆ ಪೂರ್ಣ ಕೋಟಾದ ಓವರ್ಗಳನ್ನು ಮಾಡಬಹುದು.
- ಇಂಪ್ಯಾಕ್ಟ್ ಪ್ಲೇಯರ್ ನಿಯಮವು 10 ಓವರ್ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪಂದ್ಯಗಳಿಗೆ ಅನ್ವಯಿಸುವುದಿಲ್ಲ.
ಐಪಿಎಲ್ 2024 ರಲ್ಲಿ ಬದಲಾವಣೆಗಳು ಇರುತ್ತವೆಯೇ?
ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಅದರ ಪ್ರಸ್ತುತ ಅವತಾರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಆದಾಗ್ಯೂ, ನಿಯಮದಲ್ಲಿ ಯಾವುದೇ ಬದಲಾವಣೆ ಅಗತ್ಯವಿದೆಯೇ ಎಂದು ಐಪಿಎಲ್ ಆಡಳಿತ ಮಂಡಳಿ ಚರ್ಚಿಸಲಿದೆ.
“ಯಾವುದೇ ಬದಲಾವಣೆಗಳು ಇರುವುದಿಲ್ಲ. ನಿಯಮದ ಬಗ್ಗೆ ಯಾವುದೇ ಚರ್ಚೆ ಅಥವಾ ಅಸ್ತಿತ್ವದಲ್ಲಿರುವ ಯಾವುದೇ ನಿಯಮಗಳಲ್ಲಿನ ಬದಲಾವಣೆಗಳನ್ನು ನವೆಂಬರ್ ನಲ್ಲಿ ನಡೆಯುವ ಜಿಸಿ ಸಭೆಯಲ್ಲಿ ಚರ್ಚಿಸಲಾಗುವುದು. ಎಲ್ಲಾ ಸದಸ್ಯರು ಅಗತ್ಯವನ್ನು ಭಾವಿಸಿದರೆ, ನಾವು ಕರೆ ಮಾಡುತ್ತೇವೆ”ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.