ನವ ದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ (Asia cup) ಹಣಾಹಣಿಗೆ ದಿನಗಣನೆ ಆರಂಭವಾಗುತ್ತಿರುವ ನಡುವೆ ಪಾಕ್ ತಂಡದ ನಾಯಕ ಬಾಬರ್ ಅಜಮ್‌ಗೆ ಟೆನ್ಷನ್ ಶುರುವಾಗಿದೆ. ತಮ್ಮ ಬಳಗದ ಪರಿಣಾಮಕಾರಿ ಬೌಲರ್ ಶಹೀನ್ ಶಾ ಅಫ್ರಿದಿ ಗಾಯದ ಸಮಸ್ಯೆಯಿಂದ ಇನ್ನೂ ಸುಧಾರಿಸಿಕೊಳ್ಳದಿರುವುದು ಅವರ ಚಿಂತೆಗೆ ಕಾರಣ. ಅವರ ಫಿಟ್ನೆಸ್ ಬಗ್ಗೆ ಇನ್ನೂ ಖಾತರಿಯಿಲ್ಲದ ಕಾರಣ ಭಾರತ ವಿರುದ್ಧದ ಹಣಾಹಣಿಗೆ ಸಿದ್ಧಗೊಳ್ಳುವುದು ಹೇಗೆ ಎಂಬ ಸವಾಲು ಅವರಿಗೆ ಎದುರಾಗಿದೆ.
೨೦೨೧ರಲ್ಲಿ ಯುಎಇ ಮೈದಾನದಲ್ಲಿ ನಡೆದ ಟಿ೨೦ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ ಪಾಕ್ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಲು ಈ ಶಹೀನ್ ಶಾ ಅಫ್ರಿದಿ ಕಾರಣರು. ಆರಂಭಿಕರಾದ ರೋಹಿತ್ ಶರ್ಮ (೦), ಕೆ. ಎಲ್. ರಾಹುಲ್ (೩), ಹಾಗೂ ವಿರಾಟ್ ಕೊಹ್ಲಿ (೫೭) ವಿಕೆಟ್ ಕಬಳಿಸಿದ್ದ ಈ ಬೌಲರ್ ಭಾರತ ತಂದ ದೊಡ್ಡ ಮೊತ್ತ ಪೇರಿಸದಂತೆ ತಡೆದಿದ್ದರು. ಬಳಿಕ ಪಾಕ್ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ (೭೯) ಹಾಗೂ ಬಾಬರ್ ಅಜಮ್ (೬೮) ಆರಂಭಿಕ ವಿಕೆಟ್ ೧೫೨ ರನ್ ಬಾರಿಸುವ ಮೂಲಕ ಭರ್ಜರಿ ಜಯ ತಮ್ಮದಾಗಿಸಿಕೊಂಡಿದ್ದರು.
೨೪ ವರ್ಷದ ವೇಗಿ ಪಾಕಿಸ್ತಾನದ ತಂಡದ ಪ್ರಮುಖ ಬೌಲರ್ ಅಗಿದ್ದು, ಸಾಕಷ್ಟು ಪಂದ್ಯಗಳಲ್ಲಿ ಅವರು ಜಯ ತಂದುಕೊಟ್ಟಿದ್ದಾರೆ. ಅದರಲ್ಲೂ ಯುಎಇ ಸ್ಟೇಡಿಯಮ್‌ಗಳಲ್ಲಿ ಶಹೀನ್‌ಶಾ ಅಫ್ರಿದಿ ಬೌಲಿಂಗ್ ಪರಾಕ್ರಮ ಸ್ವಲ್ಪ ಹೆಚ್ಚೇ ಇರುತ್ತದೆ. ಹೀಗಾಗಿ ಅವರ ಅಲಭ್ಯರಾದರೆ ಪಾಕಿಸ್ತಾನ ತಂಡದ ರಣತಂತ್ರಕ್ಕೆ ಹಿನ್ನಡೆಯಾಗಲಿದೆ.
ಒತ್ತಡ ಹೇರದಿರಲು ನಿರ್ಧಾರ
ಪಾಕಿಸ್ತಾನದ ವೇಗಿ ಇತ್ತೀಚಿನ ಶ್ರೀಲಂಕಾ ಪ್ರವಾಸದ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದರು. ಅವರು ಅದರಿಂದ ಇನ್ನೂ ಸುಧಾರಿಸಿಕೊಂಡಿಲ್ಲ ಎನ್ನಲಾಗಿದೆ. ಸಂಪೂರ್ಣವಾಗಿ ಗುಣಮುಖರಾಗದೇ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳದೇ ಇರಲು ಟಿಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಯಾಕೆಂದರೆ, ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ತಂಡದ ಪರ ಮೂರು ಮಾದರಿಯಲ್ಲಿ ೯೭ ಪಂದ್ಯಗಳನ್ನು ಆಡಿದ್ದು, ಪೂರ್ಣ ಗುಣಮುಖಗೊಂಡ ಬಳಿಕವಷ್ಟೇ ತಂಡಕ್ಕೆ ಸೇರಿಸಿಕೊಳ್ಳುವುದು ಉತ್ತಮ ಎಂಬುದು ಮ್ಯಾಜೇನ್ಮೆಂಟ್ ಅಭಿಪ್ರಾಯವಾಗಿದೆ.
ಏಷ್ಯಾ ಕಪ್‌ಗೆ ಮೊದಲು ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ ಟಿ೨೦ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಅದಕ್ಕೆ ಶಹೀನ್ ಸೇವೆ ಸಿಗದಿದ್ದರೂ, ಭಾರತ ವಿರುದ್ಧ ಪಂದ್ಯಕ್ಕೆ ಲಭ್ಯರಾಗುವಂತೆ ನೋಡಿಕೊಳ್ಳುವುದು ಪಾಕ್ ತಂಡದ ನಾಯಕನ ಇಚ್ಚೆಯಾಗಿದೆ.
“ಶಹೀನ್ ಅವರ ಆರೋಗ್ಯದ ಬಗ್ಗೆ ವೈದ್ಯರುಗಳ ಜತೆ ಮಾತುಕತೆ ನಡೆಸಲಾಗಿದೆ. ಅವರು ನೆದರ್ಲೆಂಡ್ಸ್ ವಿರುದ್ಧದ ಸರಣಿಗೆ ಅಲಭ್ಯರಾದರೂ, ಏಷ್ಯಾ ಕಪ್‌ಗೆ ಸಿದ್ಧಗೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗಿದೆ,” ಎಂದು ಪಾಕ್ ನಾಯಕ ಬಾಬರ್ ಅಜಮ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Virat kohli | ಸಮಾಧಾನ ಹೇಳಿ ಕೊಹ್ಲಿಯ ದಾಖಲೆಯನ್ನೇ ಮುರಿದ ಬಾಬರ್ ಅಜಮ್!