ಬೆಂಗಳೂರು: ಪಾಕಿಸ್ತಾನ ತಂಡ ಅಘಫಾನಿಸ್ತಾನ(Pakistan vs Afghanistan) ತಂಡದ ವಿರುದ್ಧ ಸೋಲು ಕಂಡ ಬಳಿಕ ಪಾಕ್ ತಂಡವನ್ನು ಎಲ್ಲಡೆ ಟ್ರೋಲ್ ಮಾಡಲಾಗುತ್ತಿದೆ. ಸ್ವತಃ ಪಾಕಿಸ್ತಾನದಲ್ಲೂ ಬಾಬರ್ ಪಡೆಯನ್ನು ಟ್ರೋಲ್ ಮಾಡಿದ್ದಾರೆ. ಇದೀಗ ಇಸ್ರೇಲ್ ಮೇಲೆ ದಾಳಿ ಮಾಡುತ್ತಿರುವ ಹಮಾಸ್ ಉಗ್ರರೂ ಕೂಡ ಪಾಕಿಸ್ತಾನ ತಂಡಕ್ಕೆ ಪತ್ರ ಬರೆದು ಟ್ರೋಲ್ ಮಾಡಿದ್ದಾರೆ. ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಮಾಸ್ ಬರೆದಿರುವ ಪತ್ರದಲ್ಲಿ “ಪ್ರೀತಿಯ ಮೊಹಮ್ಮದ್ ರಿಜ್ವಾನ್, ನಿಮ್ಮ ತಂಡ ಚೆನ್ನಾಗಿ ಆಡುತ್ತಿತ್ತು. ಗೆಲುವಿನ ಬಳಿಕ ನೀವು ನಿಮ್ಮ ಶತಕವನ್ನು ನಮಗೆ ಅರ್ಪಿಸಿದ್ದೀರಿ. ನಿಮ್ಮ ಶತಕ ನಮಗೆ ಅರ್ಪಿಸಿದ ಬಳಿಕ ತಂಡ ಹ್ಯಾಟ್ರಿಕ್ ಸೋಲಿಗೆ ತುತ್ತಾಗಿದೆ. ಇತ್ತ ನಾವು ಕೂಡ ಇಸ್ರೇಲ್ ದಾಳಿಗೆ ಪ್ರತಿದಾಳಿ ನಡೆಸಲು ಸಾಧ್ಯವಾಗದೆ ಹಿನ್ನಡೆ ಅನುಭವಿಸಿದ್ದೇವೆ. ನೀವು ಅರ್ಪಿಸಿದ ಶತಕವನ್ನು ಬೇಗನೆ ಹಿಂಪಡೆದುಕೊಳ್ಳಿ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ನಮಗೆ ನಿಮ್ಮ ಪ್ರಾರ್ಥನೆ ಬೇಕಿಲ್ಲ. ಸದ್ಯ ನೀವು ನಿಮ್ಮ ತಂಡವನ್ನು ವಿಶ್ವಕಪ್ ಟೂರ್ನಿಯಲ್ಲಿ ಉಳಿಯುವಂತೆ ಪ್ರಾರ್ಥಿಸಿ” ಎಂದು ಈ ಪತ್ರದಲ್ಲಿ ಬರೆಯಲಾಗಿದೆ.
ಹಮಾಸ್ ಉಗ್ರರು ಬರೆದಿರುವ ಪತ್ರ
Hamas has written an urgent letter for Mohammad Rizwan. #PAKvsAFG pic.twitter.com/ODW04Or26t
— THE SKIN DOCTOR (@theskindoctor13) October 23, 2023
ಅಸಲಿಗೆ ಈ ಪತ್ರವನ್ನು ಹಮಾಸ್ ಉಗ್ರರು ಬರೆದಿಲ್ಲ. ಬದಲಾಗಿ ಪಾಕಿಸ್ತಾನ ಮತ್ತು ರಿಜ್ವಾನ್ ಅವರನ್ನು ಟ್ರೋಲ್ ಮಾಡುವ ಉದ್ದೇಶಕ್ಕಾಗಿ ನೆಟ್ಟಿಗರು ಈ ಪತ್ರವನ್ನು ಬರೆದಿದ್ದಾರೆ. ಹಮಾಸ್ ಉಗ್ರರೇ ಈ ಪತ್ರವನ್ನು ಬರೆದಿರುವುದಾಗಿ ಬಿಂಬಿಸಲಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ದಾಖಲೆಯ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೊಹಮ್ಮದ್ ರಿಜ್ವಾನ್ ಅವರು ಈ ಗೆಲುವನ್ನು ಗಾಜಾದ ನನ್ನ ಸಹೋದರ-ಸಹೋದರಿಯರಿಗೆ ಅರ್ಪಣೆ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಅವರನ್ನು ಈಗ ಟ್ರೋಲ್ ಮಾಡಲಾಗಿದೆ.
ಇದನ್ನೂ ಓದಿ Viral Video: ಗೆದ್ದದ್ದು ಆಫ್ಘನ್, ಕುಣಿದು ಕುಪ್ಪಳಿಸಿದ್ದು ಇರ್ಫಾನ್ ಪಠಾಣ್
ಭಾರತೀಯರ ಸಂಭ್ರಮ
ಸದಾ ಭಾರತಕ್ಕೆ ಕೆಡುಕು ಬಯಸುವ, ಉಗ್ರ ದಾಳಿಯನ್ನು ಮಾಡುವ ಪಾಕಿಸ್ತಾನ ತಂಡ ದುರ್ಬಲ ಅಫಘಾನಿಸ್ತಾನ ವಿರುದ್ಧ ಸೋಲು ಕಾಣುತ್ತಿದ್ದಂತೆ ಪಾಕ್ನ ಸೋಲನ್ನು ಭಾರತೀಯರು ಸಂಭ್ರಮಿಸಿದ್ದಾರೆ. ಗೆದ್ದ ಅಫಘಾನಿಸ್ತಾನ ಆಟಗಾರರಿಗೆ ಅಭಿನಂದನೆ ಸಲ್ಲಿದ್ದಾರೆ. ಭಾರತೀಯರ ಬೆಂಬಲಕ್ಕೆ ಗೆಲುವಿನ ಬಳಿಕ ಆಫ್ಘನ್ ಆಟಗಾರರು ಚೆನ್ನೈ ಚೆಪಾಕ್ ಮೈದಾನಕ್ಕೆ ಒಂದು ಸುತ್ತು ಹಾಕಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಪಾಕ್ ಸೋಲಿನ ಖುಷಿಯಲ್ಲಿ ಆಫ್ಘನ್ ಆಟಗಾರರೊಂದಿಗೆ ಮೈದಾನದಲ್ಲೇ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್ ಕೂಡ ಆಗಿದೆ.
8 ವಿಕೆಟ್ ಗೆಲುವು
ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಲು ಮುಂದಾಯಿತು. ಅಂತೆಯೇ ಆಫ್ಘನ್ ಬೌಲರ್ಗಳೆದುರು ವೈಫಲ್ಯ ಕಂಡು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 282 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಅಪಘಾನಿಸ್ತಾನ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 286 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ಪಾಕ್ ವಿರುದ್ಧ ಅಫಘಾನಿಸ್ತಾನ ತಂಡ ದಾಖಲಿಸಿದ ಮೊದಲ ವಿಜಯವಾಗಿದೆ.