ಮುಂಬಯಿ : ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಈಗ ಟಿ20 ಮಾದರಿಯಲ್ಲಿ ನಂಬರ್ ಒನ್ ಬ್ಯಾಟರ್. ಒಂದೇ ವರ್ಷದಲ್ಲಿ ಅವರು ಈ ಸಾಧನೆ ಮಾಡಿದ್ದು, ತಮ್ಮ 360 ಬ್ಯಾಟಿಂಗ್ ಶೈಲಿ ಮೂಲಕ ವಿಶ್ವ ಕ್ರಿಕೆಟ್ನ ಗಮನವನ್ನೂ ಸೆಳೆದಿದ್ದಾರೆ. ಸ್ಕೈ ಎಂಬ ಉಪನಾಮದ ಮೂಲಕ ಗುರುತಿಸಿಕೊಳ್ಳುವ ಸೂರ್ಯಕುಮಾರ್ ಅವರು ಅದ್ಭುತ ಬ್ಯಾಟರ್ ಆಗಿರುವ ಹೊರತಾಗಿಯೂ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರುವುದು ಬಹಳ ತಡವಾಗಿ. ಅಂದರೆ 2021ರಲ್ಲಿ ಅವರಿಗೆ 30 ವರ್ಷವಾಗಿದ್ದಾಗ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದರೆ ಈ ಬಗ್ಗೆ ಯಾವುದೇ ಬೇಸರ ಇಲ್ಲ ಎಂಬುದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು,”ತಂಡದಲ್ಲಿ ತಡವಾಗಿ ಅವಕಾಶ ಪಡೆದಿರುವುದು ನಿಜ. ಹಾಗೆಂದು ನನಗೆ ಬೇಸರ ಅಥವಾ ಕೋಪವೇನೂ ಇಲ್ಲ. ಅದಕ್ಕಿಂತ ಮೊದಲು ದೇಶೀಯ ಕ್ರಿಕೆಟ್ನಲ್ಲಿ ನಾನು ಆಡಿದ್ದೆ. ಅದರಲ್ಲಿ ಸಾಕಷ್ಟು ಖುಷಿಪಟ್ಟಿದ್ದೆ. ಇದೊಂದು ಹೊಸ ಹೆಜ್ಜೆ ಎಂದು ಅಂದುಕೊಳ್ಳುತ್ತೇನೆ ಹಾಗೂ ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳನ್ನು ಮುಂದುವರಿಸುತ್ತೇನೆ,” ಎಂಬುದಾಗಿ ಅವರು ಹೇಳಿದ್ದಾರೆ.
“ನಾನು ಶ್ರಮದ ಬಗ್ಗೆಯೇ ಹೆಚ್ಚು ಯೋಚನೆ ಮಾಡಿದ್ದೇನೆಯೇ ಹೊರತು, ಫಲದ ಬಗ್ಗೆ ಅಲ್ಲ. ಅಂತೆಯೇ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿರುವ ನನಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವುದಕ್ಕೆ ಅತ್ಯುತ್ತಮ ಅವಕಾಶ ದೊರಕಿತು,”ಎಂಬುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ ಅವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಜತೆ ಆಡುವ ಅವಕಾಶ ಸಿಕ್ಕಿರುವುದಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ “ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಜತೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ದೊರಕಿರುವುದು ಅತ್ಯಂತ ಖುಷಿಯ ವಿಚಾರ. ಆದರೆ, ಅವರಷ್ಟು ಸಾಧನೆ ಮಾಡಲು ನನಗೆ ಸಾಧ್ಯವಿದೆ ಎಂದು ಅಂದುಕೊಳ್ಳುತ್ತೇನೆ,” ಎಂಬುದಾಗಿಯೂ ಅವರು ನುಡಿದಿದ್ದಾರೆ.
ಇದನ್ನೂ ಓದಿ | Suryakumar Yadav | ರಣಜಿ ಪಂದ್ಯದಲ್ಲಿ ಆಡಲಿದ್ದಾರೆ ಸೂರ್ಯಕುಮಾರ್ ಯಾದವ್; ಯಾಕೆ ಗೊತ್ತೇ?