ಕರಾಚಿ : ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡ ಯಶಸ್ಸು ಸಾಧಿಸದೇ ಹೋಗಿರಬಹುದು. ಆದರೆ, ಪಾಕಿಸ್ತಾನ ವಿರುದ್ಧದ ಗೆಲುವು ಮಾತ್ರ ಸ್ಮರಣೀಯ. ಅದರಲ್ಲೂ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ 82 ರನ್ ಅಭಿಮಾನಿಗಳ ಪಾಲಿನ ನೆಚ್ಚಿನ ಇನಿಂಗ್ಸ್. 19ನೇ ಓವರ್ನಲ್ಲಿ ಹ್ಯಾರಿಸ್ ರವೂಫ್ ಎಸೆತಕ್ಕೆ ಬಾರಿಸಿದ ಸ್ಟ್ರೈಟ್ ಸಿಕ್ಸರ್ ಕೂಡ ಅಷ್ಟೇ ಜನಪ್ರಿಯ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕ್ನ ವೇಗದ ಬೌಲರ್ ರವೂಫ್, ಕೊಹ್ಲಿಗೆ ಮತ್ತೊಂದು ಬಾರಿ ಅದೇ ಮಾದರಿಯ ಸಿಕ್ಸರ್ ಬಾರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಪಾಕ್ ಬೌಲರ್ಗೆ, ಭಾರತದ ವಿರುದ್ಧದ ಸೋಲಿನ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಜತೆಗೆ ಸ್ಟ್ರೈಕ್ ಸಿಕ್ಸರ್ ಬಗ್ಗೆಯೂ. ಅದಕ್ಕೆ ಪ್ರತಿಕ್ರಿಯಿಸಿದ ರವೂಫ್, ಕೊಹ್ಲಿ ಸಿಕ್ಸರ್ ಬಾರಿಸಿದ್ದಕ್ಕೆ ಖಂಡಿತವಾಗಿಯೂ ನನಗೆ ನೋವಾಗಿದೆ. ನನ್ನ ತಂಡ ಸೋತಾಗಲೂ ಅಷ್ಟೇ ನೋವು ಅನುಭವಿಸಿದ್ದೇನೆ. ಆದರೆ, ಸ್ಟ್ರೈಕ್ ಸಿಕ್ಸರ್ ಅವರ ಬ್ಯಾಟ್ನಿಂದ ಇನ್ನೊಮ್ಮೆ ಮೂಡಿ ಬರಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅದು ಅಷ್ಟೊಂದು ಸುಲಭವಲ್ಲ ಎಂದು ನುಡಿದಿದ್ದಾರೆ.
ಬೌಲರ್ಗಳ ತಲೆ ಮೇಲಿಂದ ಸ್ಟ್ರೈಕ್ ಸಿಕ್ಸರ್ ಬಾರಿಸಿದ ರೀತಿ ಅದ್ಭುತ. ಆದರೆ, ಆ ರೀತಿಯ ಶಾಟ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ಯಾವುದೇ ಬ್ಯಾಟರ್ ಆ ಮಾದರಿಯಲ್ಲಿ ಶಾಟ್ಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದರಿಂದ ಅವರು ಔಟ್ ಆಗುವ ಸಾಧ್ಯತೆಗಳೇ ಹೆಚ್ಚು. ವಿರಾಟ್ ಕೊಹ್ಲಿಯ ಶಾಟ್ ಆಯ್ಕೆಯ ಟೈಮಿಂಗ್ ಚೆನ್ನಾಗಿದೆ. ಹೀಗಾಗಿ ಅವರು ಅಂದು ಆ ಎಸೆತವನ್ನು ಸಿಕ್ಸರ್ಗಟ್ಟಿದ್ದಾರೆ. ಮತ್ತದೇ ರೀತಿಯಲ್ಲಿ ಸಿಕ್ಸರ್ ಬಾರಿಸಲು ಅವರು ಪ್ರಯತ್ನಿಸುವುದಿಲ್ಲ ಎಂಬುದಾಗಿ ರವೂಫ್ ನುಡಿದಿದ್ದಾರೆ.
ಪಾಕ್ ಬೌಲರ್ ಹ್ಯಾರಿಸ್ ಅವರು ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಏಷ್ಯಾ ಕಪ್ ವೇಳೆ ತಮ್ಮ ಜರ್ಸಿ ಮೇಲೆ ಕೊಹ್ಲಿಯ ಹಸ್ತಾಕ್ಷರ ಪಡೆದುಕೊಂಡಿದ್ದರು. ತಮ್ಮ ಎಸತಗಳಿಗೆ ಸಿಕ್ಸರ್ ಬಾರಿಸಿದ ಹೊರತಾಗಿಯೂ ಕೊಹ್ಲಿ ಆಟವನ್ನು ಅವರು ಅತಿಯಾಗಿ ಮೆಚ್ಚುತ್ತಾರೆ.
ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡ 159 ರನ್ಗಳನ್ನು ಗಳಿಸಿತ್ತು. ಪ್ರತಿಯಾಗಿ ಆಡಿದ ಭಾರತ ತಂಡ ಸತತವಾಗಿ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಧಾರವಾಗಿ ನಿಂತಿದ್ದರು. ಅದರಲ್ಲೂ ವಿರಾಟ್ ಅಜೇಯ ಅರ್ಧ ಶತಕ ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಕೊನೇ ಒವರ್ನಲ್ಲಿ ನೋಬಾಲ್ ಸಮೇತ ನಾಟಕೀಯ ಬೆಳವಣಿಗೆಗಳು ನಡೆದು ಟೀಮ್ ಇಂಡಿಯಾ ಜಯ ಸಾಧಿಸಿ ಸಂಭ್ರಮಿಸಿತ್ತು.
ಇದನ್ನೂ ಓದಿ | Rishabh Pant Car Accident | ಕಾರು ಅಪಘಾತದಲ್ಲಿ ಗಾಯಗೊಂಡ ಪಂತ್ ಚೇತರಿಕೆಗೆ ವಿರಾಟ್ ಕೊಹ್ಲಿ ಸೇರಿ ಹಲವು ಕ್ರಿಕೆಟಿಗರ ಹಾರೈಕೆ