ನವ ದೆಹಲಿ : ಭಾರತ ತಂಡ ಮುಂಬರುವ ಏಷ್ಯಾ ಕಪ್ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ನೀಡಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ, ನಾವು ಕೂಡ ಭಾರತಕ್ಕೆ ಏಕ ದಿನ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಹೇಳಿದೆ.
ಏಷ್ಯಾ ಕಪ್ ೨೦೨೩ರ ಆತಿಥ್ಯ ಪಾಕಿಸ್ತಾನಕ್ಕೆ ಲಭಿಸಿದೆ. ಆದರೆ, ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ, ಟೂರ್ನಿ ತಟಸ್ಥ ತಾಣದಲ್ಲಿ ನಡೆಯುವ ಕಾರಣ ಭಾರತ ತಂಡ ಅಲ್ಲಿಗೆ ಹೋಗುವ ಪ್ರಮೇಯವೇ ಇರುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಇದಾಗ ತಕ್ಷಣವೇ ಪ್ರತಿಕ್ರಿಯೆ ಕೊಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ವಿಶ್ವ ಕಪ್ ನಡೆಯಲಿದೆ. ಆ ಟೂರ್ನಿಯನ್ನು ನಾವು ಬಹಿಷ್ಕಾರ ಮಾಡುತ್ತೇವೆ ಎಂಬುದಾಗಿ ಹೇಳಿದೆ.
ಭಾರತ ತಂಡದ ೨೦೦೮ರಿಂದ ಪಾಕಿಸ್ತಾನಕ್ಕೆ ಪ್ರವಾಸ ಮಾಡಿಲ್ಲ. ಪಾಕಿಸ್ತಾನ ತಂಡವೂ ೨೦೧೨ರಲ್ಲಿ ಕೊನೇ ಬಾರಿಗೆ ಭಾರತಕ್ಕೆ ಪ್ರವಾಸ ಬಂದು ಟಿ೨೦ ಸರಣಿಯಲ್ಲಿ ಪಾಲ್ಗೊಂಡಿತ್ತು. ಎರಡೂ ದೇಶಗಳ ಸಂಬಂಧ ದಿನ ಕಳೆದಂತೆ ಹಳಸುತ್ತಿರುವ ಕಾರಣ ಭಾರತ ತಂಡ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದೆ. ಭಾರತ ಹಿಂದೆ ಸರಿದ ತಕ್ಷಣ ಪಾಕಿಸ್ತಾನವೂ ಬರುವುದಿಲ್ಲ ಎಂಬುದಾಗಿ ಹೇಳಿದೆ.
ಇದನ್ನೂ ಓದಿ | Asia Cup 2023 | ಏಷ್ಯಾ ಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದ ಜಯ್ ಶಾ