ಬ್ರಿಸ್ಬೇನ್ : ನಾಯಕ ಆರೋನ್ ಫಿಂಚ್ (೬೩) ಅವರ ಅರ್ಧ ಶತಕ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ನೆರವಿನಿಂದ ಮಿಂಚಿದ ಆಸ್ಟ್ರೇಲಿಯಾ ತಂಡ, ವಿಶ್ವ ಕಪ್‌ನ ಸೂಪರ್-೧೨ ಹಂತದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ೪೨ ರನ್‌ಗಳ ಭರ್ಜರಿ ವಿಜಯ ಸಾಧಿಸಿತು. ಈ ಮೂಲಕ ಒಟ್ಟಾರೆ ೫ ಅಂಕಗಳೊಂದಿಗೆ ಗುಂಪು ೧ರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಸೆಮಿಫೈನಲ್ಸ್‌ಗೇರುವ ಅವಕಾಶ ಸೃಷ್ಟಿಸಿಕೊಂಡಿದೆ.
ಗಬ್ಬಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೭೯ ರನ್ ಬಾರಿಸಿದರೆ, ದೊಡ್ಡ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ಬಳಗ ೧೮.೧ ಓವರ್‌ಗಳಲ್ಲಿ ೧೩೭ ರನ್‌ಗಳಿಗೆ ಆಲ್‌ಔಟ್ ಆಗಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆಸೀಸ್ ಬಳಗದ ಪರ ಆರೋನ್ ಫಿಂಚ್ ಅರ್ಧ ಶತಕ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರೆ, ಮಾರ್ಕಸ್ ಸ್ಟೋಯ್ನಿಸ್ (೩೫), ಮಿಚೆಲ್ ಮಾರ್ಷ್ (೨೮) ಸ್ಪರ್ಧಾತ್ಮಕ ಮೊತ್ತ ಪೇರಿಸಲು ಅಗತ್ಯ ನೆರವು ನೀಡಿದರು. ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭಿಕ ಬ್ಯಾಟರ್‌ಗಳ ವೈಫಲ್ಯದೊಂದಿಗೆ ಹಿನ್ನಡೆ ಅನುಭವಿಸಿತು. ಆದಾಗ್ಯೂ ಲಾರ್ಕನ್ ಟಕ್ಕರ್ (೭೧) ಸ್ಫೋಟಕ ಅರ್ಧ ಶತಕ ಬಾರಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಅದರೆ, ಇತರ ಆಟಗಾರರ ಬೆಂಬಲ ದೊರೆಯದ ಕಾರಣ ಸೋಲಿಗೆ ಒಳಗಾಯಿತು.
ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ ತಲಾ ೨ ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಆಸ್ಟ್ರೇಲಿಯಾ: ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೭೯ (ಆರೋನ್ ಫಿಂಚ್ ೬೩, ಮಾರ್ಕಸ್ ಸ್ಟೋಯ್ನಿಸ್ ೩೫; ಬೇರಿ ಮ್ಯಾಕ್‌ಕಾರ್ತಿ ೨೯ಕ್ಕೆ೩).
ಐರ್ಲೆಂಡ್ : ೧೮.೧ ಓವರ್‌ಗಳಲ್ಲಿ ೧೩೭ (ಲಾರ್ಕನ್ ಟಕ್ಕರ್ ೭೧, ಗ್ರೇತ್ ಡೆನ್ಲಿ ೧೪; ಗ್ಲೆನ್ ಮ್ಯಾಕ್ಸ್‌ವೆಲ್ ೧೪ಕ್ಕೆ೨).
ಇದನ್ನೂ ಓದಿ | IND vs SA | ಕಳಪೆ ಫೀಲ್ಡಿಂಗ್‌ನಲ್ಲೂ ನಾವಿಬ್ಬರೂ ಸಮಾನರು ಎಂಬುದನ್ನು ಸಾಬೀತುಪಡಿಸಿದ ರೋಹಿತ್, ವಿರಾಟ್!