ಬಾರ್ಬಡೋಸ್: ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವೆಂದರೆ ಸಾಕು, ಜಾಗತಿಕ ತಂಡಗಳೆಲ್ಲ ಹೆದರಿ ಹೋಗುತ್ತಿದ್ದವು. ವಿಂಡೀಸ್ ವಿರುದ್ಧದ ಸರಣಿ ಎಂದರೆ ಆಡುವುದಕ್ಕೂ ಆಟಗಾರರು ಹಿಂದೇಟು ಹಾಕುತ್ತಿದ್ದರು. ಸರ್ ವಿವಿಯನ್ ರಿಚರ್ಡ್ಸ್, ಮಾಲ್ಕಮ್ ಮಾರ್ಷಲ್, ಕ್ಲೈವ್ ಲಾಯ್ಡ, ಬ್ರಿಯಾನ್ ಲಾರಾ, ಕರ್ಟ್ಲಿ ಆ್ಯಂಬ್ರೋಸ್, ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್, ಹೀಗೆ ಹೆಸರು ಹೇಳಿಕೊಂಡು ಹೋದರೆ ಮುಗಿಯುವುದೇ ಇಲ್ಲ. ಇಂತಹ ಬಲಿಷ್ಠ ಆಟಗಾರರನ್ನು ಹೊಂದಿದ್ದ ತಂಡ ಈ ಬಾರಿಯ ವಿಶ್ವಕಪ್ಗೂ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಏಕದಿನ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳದ ನೋವಿನಲ್ಲೇ ಭಾರತ ವಿರುದ್ಧ ಮೊದಲ ಏಕದಿನ ಸರಣಿಯನ್ನು(IND vs WI 1st ODI) ಆಡಲು ವಿಂಡೀಸ್ ಸಜ್ಜಾಗಿದೆ. ಉಭಯ ತಂಡಗಳ ಮೊದಲ ಏಕದಿನ ಪಂದ್ಯಕ್ಕೆ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂ(Kensington Oval, Bridgetown, Barbados) ಅಣಿಯಾಗಿದೆ. ಗುರುವಾರ ಈ ಪಂದ್ಯ ಭಾರತೀಯ ಕಾಲಮಾನದಂತೆ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಜಾಗತಿಕ ಮಟ್ಟದಲ್ಲಿ ನಡೆಯುವ ಟಿ20 ಮತ್ತು ಟಿ10 ಕ್ರಿಕೆಟ್ ಟೂರ್ನಿಯ ಗೋಜಿಗೆ ಬಿದ್ದು ಏಕದಿನ ಕ್ರಿಕೆಟ್ನಲ್ಲಿ ಅಧಃಪತನ ಕಂಡಿರುವ ವೆಸ್ಟ್ ಇಂಡೀಸ್, ಭಾರತ ವಿರುದ್ಧದ ಈ ಸರಣಿಯ ಮೂಲಕ ಪುನರುತ್ಥಾನದ ಹಾದಿ ಹಿಡಿದಿತೇ ಎನ್ನುವುದು ಈ ಸರಣಿಯ ಕೌತುಕ. ತಂಡದಲ್ಲಿ ಬಲಿಷ್ಠ ಆಟಗಾರರಿದ್ದರೂ ಮಂಡಳಿಯ ಜತೆಗಿನ ವೇತನ ಕಿತ್ತಾಟದಿಂದ ಹೆಸರಿಗಷ್ಟೇ ಆಡುತ್ತಿರುವ ಆಟಗಾರರೆಲ್ಲ ದೇಶ ಮೊದಲು ಎಂದು ಆಡಬೇಕಿದೆ. ಒಂದೊಮ್ಮೆ ದೇಶಕ್ಕಾಗಿ ವಿಂಡೀಸ್ ಆಟಗಾರರು ಒಗ್ಗಟ್ಟಿನ ಪಣತೊಟ್ಟರೆ ಮುಂದಿನ ವಿಶ್ವಕಪ್ನಲ್ಲಿ ಅರ್ಹತೆ ಪಡೆದು ಕಪ್ ಎತ್ತಿದರೂ ಅಚ್ಚರಿಯಿಲ್ಲ.
ಒಂದು ವರ್ಷದ ಬಳಿಕ ತಂಡಕ್ಕೆ ಮರಳಿದ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೇರ್ ಮೇಲೆ ತಂಡ ಹೆಚ್ಚಿನ ವಿಶ್ವಾಸವಿರಿಸಿದೆ. ಈ ಬಾರಿಯ ಐಪಿಎಲ್ನಲ್ಲಿ ಅವರು ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಅಚ್ಚರಿ ಎಂದರೆ ಉತ್ತಮ ಫಾರ್ಮ್ನಲ್ಲಿದ್ದ ನಿಕೋಲಸ್ ಪೂರನ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಜಾಸನ್ ಹೋಲ್ಡರ್ಗೆ ವಿಶ್ರಾಂತಿ ನೀಡಲಾಗಿದೆ. ಇವರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಿಸಬೇಕಿದೆ.
ಇದನ್ನೂ ಓದಿ IND vs WI: ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಇತಿಹಾಸವೇ ರೋಚಕ
Test Cricket ✅
— BCCI (@BCCI) July 26, 2023
On to the ODIs 😎📸#TeamIndia | #WIvIND pic.twitter.com/2jcx0s4Pfw
ಭಾರತಕ್ಕೆ ಮಹತ್ವದ ಸರಣಿ
ಏಕದಿನ ವಿಶ್ವಕಪ್ಗೆ ಇನ್ನು ಕೆಲವೆ ದಿನಗಳು ಮಾತ್ರ ಉಳಿದಿದ್ದು ಈ ಪಂದ್ಯಾವಳಿಗೆ ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಭಾರತದ ಪಾಲಿಗೆ ಇದು ಮಹತ್ವದ ಸರಣಿಯಾಗಿದೆ. ತಂಡದ ಲೋಪವನ್ನು ಸರಿಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಈ ಸರಣಿಯನ್ನು ಕುದ್ದಾಗಿ ವೀಕ್ಷಿಸಲು ವಿಂಡೀಸ್ನಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಯ್ಕೆ ಸಮಿತಿಯ ಗಮನ ಸೆಳೆಯಬೇಕಿದೆ.
ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಗುವುದು ಅನುಮಾನ ಏಕೆಂದರೆ ಶುಭಮನ್ ಗಿಲ್ ಮತ್ತು ರೋಹಿತ್ ಅವರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್, ಹಾರ್ದಿಕ್, ಸೂರ್ಯಕುಮಾರ್ ಉತ್ತಮ ಫಾರ್ಮ್ನಲ್ಲಿರುವ ಕಾರಣ ಅವಕಾಶ ಕಷ್ಟಸಾಧ್ಯ.
ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ ಬಳಿಕ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ವಿಶ್ವಕಪ್ ನಿಟ್ಟಿನಲ್ಲಿ ಅವರ ಪ್ರದರ್ಶನವೂ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ. ಅವರು ಬೌಲಿಂಗ್ ಕೂಡ ನಡೆಸುವ ಸಾಧ್ಯತೆ ಇದೆ. ಸಂಜು ಮತ್ತು ಇಶಾನ್ ಕಿಶನ್ ಮಧ್ಯೆ ವಿಕೆಟ್ ಕೀಪರ್ ಸ್ಥಾನಕ್ಕೆ ಪೈಪೋಟಿ ಇದೆ. ಒಟ್ಟಾರೆ ಭಾರತಕ್ಕೆ ಈ ಸರಣಿ ವಿಶ್ವಕಪ್ ಟೂರ್ನಿಗೆ ನಡೆಸುವ ಅಭ್ಯಾಸವಾಗಿದೆ.