ಮೆಲ್ಬೋರ್ನ್ : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಭಾನುವಾರ ನಡೆದ ಟಿ೨೦ ವಿಶ್ವ ಕಪ್ ಪಂದ್ಯ ಹಲವು ರೋಚಕತೆಗೆ ಸಾಕ್ಷಿಯಾಗಿದೆ. ಏತನ್ಮಧ್ಯೆ, ಸೋಲಿನ ನಿರಾಸೆಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರರು ಹಾಗೂ ಅಭಿಮಾನಿಗಳು ಪಂದ್ಯದ ಅಂಪೈರ್‌ಗಳನ್ನು ದೂರುತ್ತಿದ್ದಾರೆ. ಅಂಪೈರ್‌ಗಳಿಬ್ಬರು ಭಾರತ ತಂಡಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅವರು ದೂರುತ್ತಿದ್ದಾರೆ. ಆದರೆ, ಅನುಭವಿ ಹಾಗೂ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಸೈಮನ್ ಟಫೆಲ್, ಫೀಲ್ಡ್ ಅಂಪೈರ್‌ಗಳ ನಿರ್ಧಾರವನ್ನು ಸರಿ ಎಂದಿದ್ದಾರೆ.
ಮೊಹಮ್ಮದ್ ನವಾಜ್ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿತ್ತು. ಅವರು ಎಸೆದ ಫುಲ್‌ಟಾಸ್ ಎಸೆತವೊಂದನ್ನು ವಿರಾಟ್ ಕೊಹ್ಲಿಯ ಮನವಿ ಮೇರೆಗೆ ಅಂಪೈರ್‌ಗಳು ತಡವಾಗಿ ನೋ ಬಾಲ್ ಎಂದು ತೀರ್ಪು ಕೊಟ್ಟಿದ್ದರು. ಅದಕ್ಕೂ ಪಾಕ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ನೋಬಾಲ್ ಹಿನ್ನೆಲೆಯಲ್ಲಿ ಭಾರತಕ್ಕೊಂದು ಫ್ರೀ ಹಿಟ್ ಲಭಿಸಿತ್ತು. ಆ ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದರು. ವಿಕೆಟ್‌ಗೆ ಬಿದ್ದ ಚೆಂಡು ನೇರವಾಗಿ ಥರ್ಡ್ ಮ್ಯಾನ್ ಕಡೆಗೆ ಬೌಂಡರಿ ಲೈನ್ ಕಡೆಗೆ ಸಾಗಿತ್ತು. ವೇಳೆ ದಿನೇಶ್ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ ಮೂರು ರನ್‌ಗಳನ್ನು ಓಡಿದ್ದರು. ಫೀಲ್ಡ್ ಅಂಪೈರ್‌ಗಳಾದ ಮರೈಸ್ ಎರಾಸ್ಮಸ್ ಹಾಗೂ ರಿಡ್ ಟಕ್ಕರ್ ಅದಕ್ಕೆ ಬೈ ರನ್ ಕೊಟ್ಟಿದ್ದರು. ಅದು ಡೆಡ್ ಬಾಲ್, ರನ್ ಇಲ್ಲ ಎಂಬುದಾಗಿ ಪಾಕ್ ಅಭಿಮಾನಿಗಳು ಹೇಳಿದ್ದಾರೆ.
ಐಸಿಸಿ ಪ್ಲೇಯಿಂಗ್ ಕಂಡೀಷನ್ ಈ ರೀತಿ ಇದೆ. ಫ್ರೀ ಹಿಟ್‌ನಲ್ಲಿ ಬೌಲ್ಡ್ ಆದಾಗ ಬ್ಯಾಟರ್ ಔಟ್ ಎಂದು ಪರಿಗಣಿಸದಿರುವ ಕಾರಣ ಚೆಂಡು ವಿಕೆಟ್‌ಗೆ ಬಡಿದ ಬಳಿಕವೂ ಡೆಡ್ ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಬ್ಯಾಟರ್ ರನ್‌ಗಾಗಿ ಓಡಬಹುದು. ಹೀಗಾಗಿ ಫೀಲ್ಡ್ ಅಂಪೈರ್‌ಗಳ ನಿರ್ಧಾರ ಸರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | IND vs PAK | ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು