Site icon Vistara News

Yuvraj Singh: ಯುವರಾಜ್ ಸಿಂಗ್ ಮನೆಯಿಂದ ನಗದು, ಚಿನ್ನಾಭರಣ ಕಳವು; ದೂರು ದಾಖಲಿಸಿದ ತಾಯಿ

Yuvraj Singh

ಮುಂಬಯಿ: ಕೆಲವು ದಿನಗಳ ಹಿಂದಷ್ಟೇ ಟೀಮ್​ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ(sourav ganguly) ಅವರ ಮನೆಯಿಂದ ಮೊಬೈಲ್​ ಕಳ್ಳತನವಾಗಿತ್ತು. ಇದೀಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಅವರ ಪಂಚಕುಲದ ಎಂಡಿಸಿ ಸೆಕ್ಟರ್ 4ರಲ್ಲಿರುವ ನಿವಾಸದಲ್ಲಿ(Theft at Yuvraj Singh’s Panchkula home) ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯಲ್ಲಿದ್ದ 75 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ಕಳವಾಗಿದೆ ಎಂದು ಯುವರಾಜ್ ಸಿಂಗ್​ ತಾಯಿ ಶಬ್ನಮ್ ಸಿಂಗ್(Shabnam Singh) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜತೆಗೆ ಮನೆಗೆಲಸದ ಸಿಬ್ಬಂದಿಗಳಾದ ಲಲಿತಾ ದೇವಿ ಮತ್ತು ಬಿಹಾರ ಮೂಲದ ಅಡುಗೆ ಸಿಬಂದಿ ಸಿಲ್ದಾರ್ ಪಾಲ್ ಅವರ ಮೇಲೆ ಅನುಮಾನವಿದೆ ಎಂದು ಹೇಳಿಕೊಂಡಿದ್ದಾರೆ.

ಶಬ್ನಮ್ ಸಿಂಗ್ ಹೇಳಿಕೆ ಪ್ರಕಾರ, ಸೆಪ್ಟೆಂಬರ್ 2023 ರಿಂದ ಗುರ್ಗಾಂವ್‌ನಲ್ಲಿರುವ ತಮ್ಮ ಎರಡನೇ ನಿವಾಸದಲ್ಲಿ ವಾಸಿಸುತ್ತಿದ್ದರು ಬಳಿಕ ಅಕ್ಟೋಬರ್ 5, 2023 ರಂದು ಅವರು ಪಂಚಕುಲದ ಮನೆಗೆ ಹಿಂದಿರುಗಿದ್ದಾರೆ, ಈ ವೇಳೆ ಮನೆಯಲ್ಲಿದ್ದ ಸುಮಾರು 75,000 ರೂಪಾಯಿ ಮೌಲ್ಯದ ಆಭರಣಗಳು ಮತ್ತು ಇತರ ವಸ್ತುಗಳು ಕಪಾಟಿನಲ್ಲಿ ಕಾಣೆಯಾಗಿವೆ ಎಂದು ಹೇಳಿದ್ದಾರೆ. ಇದೇ ಹೊತ್ತಿಗೆ ಮನೆಕೆಲಸದ ಸಿಬ್ಬಂದಿಗಳಾದ ಲಲಿತಾ ದೇವಿ ಮತ್ತು ಸಿಲ್ದಾರ್ ಪಾಲ್ ಇದ್ದಕ್ಕಿದ್ದಂತೆ ತಮ್ಮ ಕೆಲಸವನ್ನು ತೊರೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಕಳ್ಳತನವಾದ ವಿಚಾರದಲ್ಲಿ ಮನೆಕೆಲಸದ ಸಿಬ್ಬಂದಿಗಳ ಕೈಚಳಕ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು ಕೂಲಂಕುಷ ವಿಚಾರಣೆ ನಡೆಸಬೇಕೆಂದು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಅಚ್ಚರಿ ಎಂದರೆ 2023ರಲ್ಲಿ ಕಳವಾಗಿದ್ದರೂ ಕೂಡ ದೂರು ನೀಡಲು ಇಷ್ಟು ತಡ ಮಾಡಿದ್ದು ಏಕೆ ಎನ್ನುವುದು ತಿಳಿದುಬಂದಿಲ್ಲ.

ಇದನ್ನೂ ಓದಿSourav Ganguly: ಮನೆಯಿಂದಲೇ ಗಂಗೂಲಿಯ ಮೊಬೈಲ್​ ಕಳವು; ಡೇಟಾ ಸೋರಿಕೆ ಭಯ!

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ಯುವರಾಜ್​? 


ಯುವರಾಜ್‌ ಸಿಂಗ್‌ ಅವರು ರಾಜಕೀಯದಲ್ಲಿ ಇನಿಂಗ್ಸ್​ ಆರಂಭಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಬಿಜೆಪಿ ಪಕ್ಷ ಸೇರಿ(Yuvraj Singh to join BJP) ಇದೇ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಮೂರು ದಿನಗಳ ಹಿಂದೆ ಕೇಂದ್ರ ಭೂ ಸಾರಿಗೆ-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರು ಯುವರಾಜ್​ ಸಿಂಗ್​ಕುಟುಂಬದವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಸಿಕ್ಸರ್ ಸಿಂಗ್ ಯುವಿ ಬಿಜೆಪಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ನಿತಿನ್‌ ಗಡ್ಕರಿ ಕೂಡ ಟ್ವಿಟರ್​ ಎಕ್ಸ್​ನಲ್ಲಿ ಯುವರಾಜ್​ ಭೇಟಿ ತುಂಬಾನೆ ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಪಂಜಾಬ್​ನ ಗುರುದಾಸ್​ಪುರ ಲೋಕಸಭಾ ಕ್ಷೇತ್ರದಿಂದ ಯುವರಾಜ್ ಸಿಂಗ್ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದ್ದು, ಇದೇ ಕಾರಣದಿಂದಾಗಿ ನಿತಿನ್ ಗಡ್ಕರಿ ಯುವರಾಜ್​ ಸಿಂಗ್​ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಟೀಮ್​ ಇಂಡಿಯಾದ ಯುವರಾಜ್​ ಸಿಂಗ್​ ಸ್ನೇಹಿತರೂ ಆಗಿರುವ ಗೌತಮ್​ ಗಂಭಿರ್​ ಬಿಜೆಪಿ ಪಕ್ಷದ ಸಂಸದರಾಗಿದ್ದರೆ. ಹರ್ಭಜನ್​ ಸಿಂಗ್​ ಅವರು ಆಮ್​ ಆದ್ಮಿ ಪಕ್ಷದ ಸಂಸದರಾಗಿದ್ದಾರೆ. ಇದೀಗ ಯುವರಾಜ್​ ಸಿಂಗ್​ ಅವರು ಕೂಡ ರಾಜಕೀಯಕ್ಕೆ ಎಂಟ್ರಿಕೊಟ್ಟರೂ ಅಚ್ಚರಿಯಿಲ್ಲ.

Exit mobile version