ಲಾಹೋರ್ : ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK) ನಡುವೆ ಭಾನುವಾರ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ವಿಶ್ವದ ಕ್ರಿಕೆಟ್ ಅಭಿಮಾನಿಗಳು ಈ ಹಣಾಹಣಿಯನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಈ ಬಾರಿ ಗೆಲ್ಲುವವರು ಯಾರು ಎಂಬ ಲೆಕ್ಕಾಚಾರ ಶುರುವಾಗಿದ್ದು, ಇತ್ತಂಡಗಳ ಬಲಾಬಲವನ್ನು ಹೋಲಿಕೆ ಮಾಡಲಾಗುತ್ತಿದೆ. ಆದರೆ, ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಈ ಬಾರಿ ಗೆಲ್ಲುವುದು ಭಾರತವೇ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ದ್ಯಾನಿಶ್ ಕನೇರಿಯಾ ಅವರು ಇದೇ ಮಾತನ್ನು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶದಲ್ಲಿ ಅವರು ಈ ಸಲ ಗೆಲ್ಲುವ ಚಾನ್ಸ್ ಭಾರತಕ್ಕಿದೆ ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ಆತಿಥ್ಯ ವಹಿಸಲಿದೆ. ಇದೇ ಪಿಚ್‌ನಲ್ಲಿ ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ ೧೦ ವಿಕೆಟ್‌ಗಳ ಸೋಲಿಗೆ ಒಳಗಾಗಿತ್ತು. ಹೀಗಾಗಿ ಪಾಕಿಸ್ತಾನ ತಂಡ ಹೆಚ್ಚು ವಿಶ್ವಾಸದಲ್ಲಿದೆ. ಅದರೆ, ಈ ಸಲ ದುಬೈಗೆ ತೆರಳಿರುವ ಭಾರತ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡ ಎನಿಸಿಕೊಂಡಿದೆ. ಹೀಗಾಗಿ ದ್ಯಾನಿಶ್ ಕನೇರಿಯಾ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎಂದಿದ್ದಾರೆ. ಜತೆಗೆ ಭಾರತ ತಂಡದ ಬ್ಯಾಟರ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
“”ಫಾರ್ಮ್ ವಿಚಾರಕ್ಕೆ ಬಂದರೆ ಭಾರತ ತಂಡ ಹೆಚ್ಚು ಟಿ೨೦ ಪಂದ್ಯಗಳನ್ನು ಆಡುತ್ತಿದೆ. ತಂಡದ ಎಲ್ಲ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಂತೆಯೇ ಕಾಲಕಾಲಕ್ಕೆ ಹಲವಾರು ಬದಲಾವಣೆ ಮಾಡಲಾಗಿದೆ. ಅದೇ ರೀತಿ ನಾಯಕತ್ವದ ನಿರ್ವಹಣೆಯನ್ನೂ ಉತ್ತಮವಾಗಿ ಮಾಡಲಾಗಿದೆ,” ಎಂದು ಕನೇರಿಯಾ ತಮ್ಮ ಮಾತಿಗೆ ಉದಾಹರಣೆಗಳನ್ನು ನೀಡಿದ್ದಾರೆ.
ಎ,ಬಿ,ಸಿ ತಂಡ
ಭಾರತದಲ್ಲಿ ಎ, ಬಿ ಮತ್ತು ಸಿ ಎಂಬಂತೆ ಮೂರು ತಂಡಗಳಿವೆ. ಅಗತ್ಯಕ್ಕೆ ತಕ್ಕ ಹಾಗೆ ಸಿಡಿದೇಳಬಲ್ಲ ಬಲಿಷ್ಠ ಆಟಗಾರರು ಇದ್ದಾರೆ. ಎಲ್ಲ ಆಟಗಾರರು ಒಂದು ತಂಡವಾಗಿ ಬೆಳೆದಿದ್ದಾರೆ. ಪಾಕಿಸ್ತಾನದಲ್ಲಿ ಕೆಲವು ಆಟಗಾರರನ್ನು ಬಿಟ್ಟರೆ ಒಂದು ಬಲಿಷ್ಠ ತಂಡವಾಗಿ ಬೆಳೆದಿಲ್ಲ. ಶಹೀನ್ ಶಾ ಅಫ್ರಿದಿ ಗಾಯಗೊಂಡಿರುವ ಕಾರಣ ಪಾಕಿಸ್ತಾನ ತಂಡ ಬೌಲಿಂಗ್ ಕೂಡ ದುರ್ಬಲ ಎನಿಸಿದೆ. ಇದುವರೆಗೆ ಅವರನ್ನೇ ನೆಚ್ಚಿಕೊಂಡಿದ್ದ ತಂಡಕ್ಕೆ ಹಿನ್ನಡೆಯಾಗಿದೆ. ಅದರೆ, ಭಾರತದ ಬೌಲಿಂಗ್ ವಿಭಾಗ ಹೆಚ್ಚು ಶಕ್ತಿಶಾಲಿ ಎನಿಸಿದೆ. ಹೆಚ್ಚು ಪಂದ್ಯಗಳನ್ನು ಆಡಿರುವ ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ಎದುರಾಳಿ ತಂಡಕ್ಕೆ ಆಘಾತ ಮಾಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಯಜ್ವೇಂದ್ರ ಚಹಲ್, ಅಶ್ವಿನ್ ಹಾಗೂ ರವಿ ಬಿಷ್ಣೋಯಿ ಅವರನ್ನು ಕರೆದುಕೊಂಡು ಬರುವ ಮೂಲಕ ಎಲ್ಲ ವಿಭಾಗವೂ ಸಮಾನ ಶಕ್ತಿ ಹೊಂದುವಂತೆ ಮಾಡಲಾಗಿದೆ,” ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | T20 World Cup | ಐದೇ ನಿಮಿಷದಲ್ಲಿ ಸೇಲಾಗಿದೆ ಭಾರತ- ಪಾಕಿಸ್ತಾನ ಪಂದ್ಯದ ಟಿಕೆಟ್!