ಮುಂಬಯಿ : ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುಂಬಯಿ ತಂಡದ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ಗೆ (Sarfaraz Khan) ಅವಕಾಶ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ಹಿರಿಯ ಆಟಗಾರರನೇಕರು ಆಯ್ಕೆ ಮಂಡಳಿಯ ನಿರ್ಧಾರವನ್ನು ಖಂಡಿಸಿದ್ದರು. ರಣಜಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅವರನ್ನು ಬಿಟ್ಟು ಟಿ20 ಆಡುವವರನ್ನೆಲ್ಲ ತಂಡಕ್ಕೆ ಸೇರಿಸಿಕೊಂಡಿದ್ದು ಸರಿಯಲ್ಲ ಎಂಬುದು ಹಿರಿಯ ಆಟಗಾರರ ಅಭಿಪ್ರಾಯವಾಗಿತ್ತು. ಇವೆಲ್ಲದ್ದಕ್ಕೆ ಇದೀಗ ಆಯ್ಕೆ ಮಂಡಳಿಯ ಸದಸ್ಯರೊಬ್ಬರು ಉತ್ತರ ನೀಡಿದ್ದಾರೆ.
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಸಿದ್ಧಾರ್ಥ್ ಶರತ್ ಅವರು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ತಂಡವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಆಯ್ಕೆ ಮಂಡಳಿ ಕೆಲವೊಂದು ಮಾನದಂಡಗಳನ್ನು ಪಾಲಿಸುತ್ತದೆ. ಅಂತೆಯೇ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡುವ ವೇಳೆಯೂ ಸಮತೋಲಿತ ತಂಡ ರಚಿಸುವ ಕುರಿತು ಚಿಂತನೆ ಮಾಡಿದ್ದೆವು. ಹೀಗಾಗಿ ಸರ್ಫರಾಜ್ ಖಾನ್ಗೆ ಅವಕಾಶ ನೀಡಲು ಆಗಲಿಲ್ಲ ಎಂದು ಹೇಳಿದ್ದಾರೆ.
ಸರ್ಫರಾಜ್ ಖಾನ್ ಅವರ ಪ್ರದರ್ಶನದ ಬಗ್ಗೆ ನಮಗೆ ಅರಿವಿದೆ. ಆಯ್ಕೆ ಸಮಿತಿಯೂ ಅವರಿಗೆ ಮುಂದೆ ಅವಕಾಶ ನೀಡಲಿದೆ ಎಂಬದಾಗಿ ಅವರು ಹೇಳಿದರು.
ಇದನ್ನೂ ಓದಿ | Indian Cricket Team | ಸಾಧನೆ ಮಾಡಿದರೂ ಸರ್ಫರಾಜ್ ಖಾನ್ಗೆ ಇಲ್ಲ ಅವಕಾಶ, ಬೋಗ್ಲೆ ಬೇಸರ
ಸರ್ಫರಾಜ್ ಖಾನ್ ಅವರು ಮುಂಬಯಿ ಪರವಾಗಿ ಹಾಲಿ ರಣಜಿ ಟ್ರೋಫಿಯಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು. ಕಳೆದ ಎರಡು ಆವೃತ್ತಿಯಲ್ಲೂ ಸರ್ಫರಾಜ್ ಖಾನ್ ರಣಜಿ ಋತುವಿನಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.