ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ(Chetan Sharma) ಅವರ ವಿವಾದಾತ್ಮಕ ಹೇಳಿಕೆಯೊಂದು ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಭಾರತ ತಂಡದಲ್ಲಿ ಎರಡು ಬಣಗಳಿದೆ ಎಂಬ ಆಘಾತಕಾರಿ ವಿಚಾರವೊಂದನ್ನು ಹೊರಹಾಕಿದ್ದಾರೆ.
ಖಾಸಗಿ ವಾಹಿನಿಯೊಂದು ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ(Rohit Sharma) ಅನೇಕ ಸಂಗತಿಗಳನ್ನು ಹೊರಹಾಕಿದ್ದಾರೆ. ಗಾಯಗಳನ್ನು ಮುಚ್ಚಿಡಲು ಆಟಗಾರರು ಇಂಜೆಕ್ಷನ್ ತೆಗೆದುಕೊಳ್ಳುವ ಆಘಾತಕಾರಿ ಸಂಗತಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಮತ್ತು ವಿರಾಟ್ ಕೊಹ್ಲಿ(Virat Kohli) ವಿವಾದದಲ್ಲಿ ನಿಜವಾಗಿ ನಡೆದಿದ್ದೇನು ಹೀಗೆ ಹಲವಾರು ಮಾಹಿತಿಯನ್ನು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಭಾರತ ತಂಡದಲ್ಲಿ ಎರಡು ಬಣಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ Chetan Sharma: ಟಿ20ಯಲ್ಲಿ ರೋಹಿತ್, ಕೊಹ್ಲಿ ಆಟ ಮುಗಿದಿದೆ; ಚೇತನ್ ಶರ್ಮಾ
ಭಾರತ ತಂಡದಲ್ಲಿ ಎರಡು ಬಣಗಳಿವೆ. ಒಂದನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಇನ್ನೊಂದನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಂಡದ ಆಯ್ಕೆ ವಿಚಾರದಲ್ಲಿ ನಾಯಕ ರೋಹಿತ್ ಶರ್ಮಾ ಜತೆ ಮಾತುಕತೆ ನಡೆಸಿದಾಗಲೆಲ್ಲ ವಿರಾಟ್ ಕೂಡ ಮಧ್ಯ ಪ್ರವೇಶಿಸುತ್ತಾರೆ. ಅವರು ಮೈದಾನದಲ್ಲಿ ಜತೆಯಾಗಿ ಆಡಿದರೂ ಇವರಿಬ್ಬರ ಮಧ್ಯೆ ನಾಯಕತ್ವದ ವಿಚಾರದಲ್ಲಿ ಮನಸ್ತಾಪವಿದೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಒಟ್ಟಾರೆ ಇದೀಗ ಚೇತನ್ ಶರ್ಮಾ ಅವರ ಈ ಹೇಳಿಕೆಯಿಂದ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಆರಂಭವಾಗಿದ್ದು ಅವರ ತಲೆದಂಡವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.