ಲಂಡನ್: 2024ರ ಜನವರಿಯಲ್ಲಿ ಪ್ರಾರಂಭವಾಗುವ ಭಾರತ ಮತ್ತು ಇಂಗ್ಲೆಂಡ್(IND vs ENG test) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಕೋಚ್ ಬ್ರೆಂಡನ್ ಮೆಕಲಮ್(Brendon McCullum) ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇನೆ ಎಂದು ಮೊಯಿನ್ ಅಲಿ(Moeen Ali) ಸ್ಪಷ್ಟಪಡಿಸಿದ್ದಾರೆ.
2021ರಲ್ಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಮೋಯಿನ್ ಅಲಿ ಅವರು ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡ ಕಾರಣ ನಾಯಕ ಬೆನ್ ಸ್ಟೋಕ್ಸ್(Ben Stokes) ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ಒತ್ತಾಯಕ್ಕೆ ಮಣಿದು ನಿವೃತ್ತಿ ವಾಪಸ್ ಪಡೆದು ಆಸೀಸ್ ವಿರುದ್ಧ ಆ್ಯಶಸ್(the ashes 2023) ಸರಣಿಯಲ್ಲಿ ಆಡಿದ್ದರು. ಆದರೆ ಆ್ಯಶಸ್ ಸರಣಿ ಮುಕ್ತಾಯದ ಬೆನ್ನಲ್ಲೇ ಮತ್ತೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಜತೆಗೆ ಇನ್ನೊಮ್ಮೆ ನನಗೆ ನಿವೃತ್ತಿ ವಾಪಸ್ ಪಡೆದು ಆಡುವ ಮನವಿ ಮಾಡಿದರೆ ಇದನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುವ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಅಂದು ಹೇಳಿದಂತೆ ಮೆಕಲಮ್ ಅವರ ಮನವಿಯನ್ನು ಅಲಿ ತಿರಸ್ಕರಿಸಿದ್ದಾರೆ.
“ಆ್ಯಶಸ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಭಾರತ ವಿರುದ್ಧದ ಸರಣಿಯಲ್ಲೂ ಆಡುವಂತೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ನನ್ನಲ್ಲಿ ಒತ್ತಾಯಿಸಿದರು. ಆದರೆ ನಾನು ಈ ವಿನಂತಿಯನ್ನು ತಿರಸ್ಕರಿಸಿದ್ದೇನೆ. ದೀರ್ಘ ಸ್ವರೂಪದ ಕ್ರಿಕೆಟ್ಗೆ ನನ್ನ ದೇಹ ಸ್ಪಂದಿಸುತ್ತದೆ ಎನ್ನುವ ಯಾವುದೇ ನಂಬಿಕೆ ನನ್ನಲ್ಲಿಲ್ಲ. ಹೀಗಾಗಿ ಟೆಸ್ಟ್ನಿಂದ ನಾನು ದೂರ ಉಳಿಯಲು ದೃಡ ನಿರ್ಧಾರ ಮಾಡಿದ್ದೇನೆ” ಎಂದು ಅಲಿ ಹೇಳಿದರು.
ಇದನ್ನೂ ಓದಿ Moeen Ali:’ನಿವೃತ್ತಿ ವಾಪಸ್’ ಸಂದೇಶ ಬಂದರೆ ಅಳಿಸಿ ಹಾಕುವೆ; ಮೊಯಿನ್ ಅಲಿ ಖಡಕ್ ನಿರ್ಧಾರ
36ರ ಹರೆಯದ ಮೋಯಿನ್ ಅಲಿ ಇದುವರೆಗೆ 68 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಲಿ 28.3ರ ಸರಾಸರಿಯಲ್ಲಿ 3094 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಮತ್ತು 15 ಅರ್ಧಶತಕಗಳನ್ನು ಬಾರಿಸಿದ್ದಾರೆ. ಉಪಯುಕ್ತ ಸ್ಪಿನ್ನರ್ ಆಗಿರುವ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 204 ವಿಕೆಟ್ ಕಬಳಿಸಿದ್ದಾರೆ.