Site icon Vistara News

Double Century in ODI | ಏಕ ದಿನ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರರು ಇವರು; ಎಷ್ಟೆಷ್ಟು ರನ್‌ ಬಾರಿಸಿದ್ದಾರೆ?

Double Century in ODI

ಚಿತ್ತಂಗಾಂಗ್: ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್‌ ಇಶಾನ್‌ ಕಿಶನ್ ದಾಖಲೆಯ (210) ದ್ವಿಶತಕ ಬಾರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಏಕ ದಿನ ಮಾದರಿಯಲ್ಲಿ ಗರಿಷ್ಠ ವೇಗದ ದ್ವಿಶತಕವಾಗಿದೆ. ಅವರು ೧೨೬ ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಏಕ ದಿನ ಮಾದರಿಯಲ್ಲಿ ಇದುವರೆಗೆ ೯ ದ್ವಿಶತಕಗಳು ದಾಖಲಾಗಿವೆ. ಅದರಲ್ಲಿ ಮೂರು ದ್ವಿ ಶತಕಗಳ ಸಾಧನೆ ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಅವರ ಹೆಸರಿನಲ್ಲಿದೆ. ಹೀಗಾಗಿ ಒಟ್ಟು ಏಳು ಬ್ಯಾಟರ್‌ಗಳು ದ್ವಿಶತಕ ಬಾರಿಸಿದಂತಾಗಿದೆ. ಅವರ ವಿವರ ಇಲ್ಲಿದೆ.

ದ್ವಿಶತಕದ ಸಾಧನೆ ಸೇರಿದಂತೆ ಗರಿಷ್ಠ ರನ್‌ ಬಾರಿಸಿದ ದಾಖಲೆ ರೋಹಿತ್ ಶರ್ಮ ಅವರ ಹೆಸರಿನಲ್ಲಿದೆ. ಅವರು ೨೦೧೪ರ ನವೆಂಬರ್ ೧೩ರಂದು ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ೨೬೪ ರನ್‌ ಬಾರಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದರು. ಅಂತೆಯೇ ಅವರು ೨೦೧೩ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ೨೦೯ ರನ್‌ ಬಾರಿಸಿದ್ದರು. ಇದರ ಜತೆಗೆ ೨೦೧೭ರ ಡಿಸೆಂಬರ್ ೧೩ರಂದು ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಹಣಾಹಣಿಯಲ್ಲಿ ಅಜೇಯ ೨೦೮ ರನ್‌ ಬಾರಿಸಿದ್ದಾರೆ.

ದ್ವಿಶತಕ ಹಾಗೂ ಗರಿಷ್ಠ ರನ್‌ ಗಳಿಸಿದವರ ಸಾಲಿನಲ್ಲಿ ನ್ಯೂಜಿಲ್ಯಾಂಡ್‌ನ ಮಾರ್ಟಿನ್‌ ಗಪ್ಟಿಲ್‌ ಎರಡನೇ ಸ್ಥಾನ ಪಡೆದಿದ್ದಾರೆ. ಅವರು ೨೦೧೫ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಅಜೇಯ ೨೩೭ ರನ್‌ ಬಾರಿಸಿದ್ದರು. ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಈ ಪಂದ್ಯ ನಡೆದಿತ್ತು.

ಮೂರನೇ ಸ್ಥಾನವನ್ನು ಟೀಮ್‌ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್ ಗಳಿಸಿದ್ದಾರೆ. ಅವರು ಇಂದೋರ್‌ನಲ್ಲಿ ೨೦೧೧ರಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ೨೧೯ ರನ್‌ ಬಾರಿಸಿದ್ದಾರೆ. ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟರ್‌ ಕ್ರಿಸ್‌ ಗೇಲ್‌ ಅವರು ಜಿಂಬಾಬ್ವೆ ವಿರುದ್ಧದ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ನಡೆದ ಪಂದ್ಯದಲ್ಲಿ ೨೧೫ ರನ್‌ ಬಾರಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಪಾಕಿಸ್ತಾನದ ಫಖರ್ ಜಮಾನ್ ೨೦೧೮ರಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ ೨೧೦ ರನ್ ಬಾರಿಸಿ ಈ ಸಾಲಿನಲ್ಲಿ ಐದನೇ ಸ್ಥಾನ ಹೊಂದಿದ್ದಾರೆ. ೨೧೦ ರನ್‌ ಬಾರಿಸಿರುವ ಇಶಾನ್‌ ಕಿಶನ್‌ ನಂತರದ ಸ್ಥಾನ ಪಡೆದಿದ್ದಾರೆ. ಈ ಸಾಧಕರ ಪಟ್ಟಿಯಲ್ಲಿ ಕೊನೇ ಸ್ಥಾನ ಸಚಿನ್‌ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಅವರು ಗ್ವಾಲಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ ೨೦೦ ರನ್‌ ಬಾರಿಸಿದ್ದರು.

ಇದನ್ನೂ ಓದಿ | Ishan Kishan | ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿ ಚೊಚ್ಚಲ ದ್ವಿಶತಕ ಸಿಡಿಸಿದ ಇಶಾನ್​ ಕಿಶನ್​

Exit mobile version