ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಐಪಿಎಲ್(IPL 2024) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ನಡೆಯಲಿದೆ. ಎಲ್ಲ ತಂಡದ ಅಭಿಮಾನಿಗಳು ಕೂಡ ಪ್ರಾಂಚೈಸಿಗೆ ಯಾವ ಆಟಗಾರರನ್ನು ಖರೀದಿ ಮಾಡಬೇಕು ಎಂದು ಸಲಹೆಯನ್ನು ನೀಡುತ್ತಿದ್ದಾರೆ.
ಕರ್ನಾಟಕದ ತಂಡವಾದರೂ ಕೂಡ ಇದರಲ್ಲಿ ಕನ್ನಡಿಗ ಆಟಗಾರರಿಲ್ಲ ಎಂಬ ಕೂಗು ಪ್ರತಿ ಬಾರಿಯೂ ಆರ್‌ಸಿಬಿ ಅಭಿಮಾನಿಗಳದ್ದು. ಇದೇ ವಿಚಾರವಾಗಿ ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಈ ಬಾರಿ ಹರಾಜಿನಲ್ಲಿ ಮೂವರು ಕರ್ನಾಟಕದ ಆಟಗಾರರನ್ನು ಆರ್‌ಸಿಬಿ ಖರೀದಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಬಾರಿಯ ಹಾರಾಜಿನಲ್ಲಿ ಒಟ್ಟು 14 ಕರ್ನಾಟಕದ ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರೆಂದರೆ ಮನೀಷ್ ಪಾಂಡೆ, ಜಗದೀಶ್ ಸುಚಿತ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ್, ಬಿ.ಆರ್ ಶರತ್, ಮನ್ವಂತ್ ಕುಮಾರ್, ಎಲ್.ಆರ್ ಚೇತನ್, ಕೆ.ಎಲ್ ಶ್ರೀಜಿತ್, ಎಂ. ವೆಂಕಟೇಶ್, ಮೋನಿಶ್ ರೆಡ್ಡಿ, ಅಭಿಲಾಷ್ ಶೆಟ್ಟಿ.
ಇದನ್ನೂ ಓದಿ IPL 2024: ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ ಏರಿಕೆ; ಆರ್ಸಿಬಿಗೆ ಎಷ್ಟನೇ ಸ್ಥಾನ?
ಬಿ.ಆರ್ ಶರತ್
ಬಿ.ಆರ್ ಶರತ್ ಅವರು ದೇಶೀಯ ಟೂರ್ನಿಯಲ್ಲಿ ಕರ್ನಾಟಕದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಅವರು ಆರಂಭಿಕ ಬ್ಯಾಟರ್ ಆಗಿದ್ದಾರೆ. ಈಗಾಗಲೇ ಅವರು ತಮ್ಮ ಸ್ಫೋಟ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿಯ ಮಿನಿ ಹರಾಜಿನಲ್ಲಿ ಆರ್‌ಸಿಬಿ ಇವರ ಮೇಲೆ ಕಣ್ಣಿಟ್ಟಿದೆ.
ಶುಭಾಂಗ್ ಹೆಗ್ಡೆ
22 ವರ್ಷ ವಯಸ್ಸಿನ ಆಲ್ ರೌಂಡರ್ ಆಗಿರುವ ಶುಭಾಂಗ್ ಹೆಗ್ಡೆ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಶ್ರೇಷ್ಠ ಪ್ರದರ್ಶನ ತೋರಿದ್ದರು. ಅಲ್ಲದೆ ಬೆಳಗಾವಿ ಪ್ಯಾಂಥರ್ಸ್ ತಂಡದಲ್ಲಿಯೂ ಉತ್ತಮ ಆಟವಾಡಿದ್ದಾರೆ. 4 ಟಿ20 ಪಂದ್ಯ ಆಡಿರುವ ಅವರು 2 ವಿಕೆಟ್ ಉರುಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3 ವಿಕೆಟ್ ಹಾಗೂ 30 ರನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ವಿಕೆಟ್ ಹಾಗೂ 135 ರನ್ ಬಾರಿಸಿದ್ದಾರೆ.
ಮನೀಷ್ ಪಾಂಡೆ
ಆರ್‌ಸಿಬಿಯ ಮಾಜಿ ಆಟಗಾರನಾಗಿರುವ ಮನೀಷ್ ಪಾಂಡೆ ಅವರನ್ನು ಮತ್ತೆ ಆರ್‌ಸಿಬಿ ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ. 170 ಐಪಿಎಲ್ ಆಡಿರುವ ಪಾಂಡೆ 3808 ರನ್ ಬಾರಿಸಿದ್ದಾರೆ. 1 ಶತಕ ಮತ್ತು 22 ಅರ್ಧಶತಕ ಬಾರಿಸಿದ್ದಾರೆ. 114 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
214 ಭಾರತೀಯ ಆಟಗಾರರು
ಎಲ್ಲ ಪ್ರಾಂಚೈಸಿಗಳು ಬಿಡ್ಡಿಂಗ್ನಲ್ಲಿ ಆಟಗಾರರನ್ನು ಖರೀದಿಸಲು ಸಕಲ ಸಿದ್ಧತೆ ನಡೆಸಿವೆ. ಇದೀಗ ಐಪಿಎಲ್ ಮಂಡಳಿಯು ಹರಾಜಿಗೆ ಒಳಗಾಗಲಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ.
ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್ನ ಸ್ಟೀವನ್ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.