ಮುಂಬಯಿ: ಇಂಗ್ಲೆಂಡ್(IND vs ENG) ವಿರುದ್ಧದ ದ್ವಿತೀಯ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತ ತಂಡದ ಆಟಗಾರ ಶುಭಮನ್ ಗಿಲ್(Shubman Gill) ಬೆರಳಿಗೆ ಗಾಯಗೊಂಡು ನಾಲ್ಕನೇ ದಿನ ಫೀಲ್ಡಿಂಗ್ ನಡೆಸಿರಲಿಲ್ಲ. ಹೀಗಾಗಿ ಭಾರತ ತಂಡಕ್ಕೆ ಆತಂಕವೊಂದು ಕಾಡಿತ್ತು. ಆದರೆ ಆತಂಕವನ್ನು ಸ್ವತಃ ಶುಭಮನ್ ಗಿಲ್(shubman gill injury update) ಅವರೇ ದೂರ ಮಾಡಿದ್ದಾರೆ. ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಇದರಿಂದ ಟೀಮ್ ಇಂಡಿಯಾ ನಿಟ್ಟುಸಿರು ಬಿಟ್ಟಿದೆ.
ವಿರಾಟ್ ಕೊಹ್ಲಿ ಅವರ ಆಗಮನದ ಬಗ್ಗೆ ಇದುವರೆಗೆ ಯಾವುದೇ ಖಚಿತತೆ ಇಲ್ಲದೆ, ಅತ್ತ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಕೆ.ಎಲ್ ರಾಹುಲ್ ಗಾಯಗೊಂಡು ದ್ವಿತೀಯ ಪಂದ್ಯದಿಂದ ಹೊರಗುಳಿದಿದ್ದರು. ಅಲ್ಲದೆ ಮೂರನೇ ಪಂದ್ಯದಲ್ಲಿಯೂ ಆಡುವುದು ಖಚಿತವಿಲ್ಲ. ಹೀಗಿರುವಾಗಲೇ ಗಿಲ್ ಬೆರಳಿಗೆ ಗಾಯವಾದ ತಕ್ಷಣ ಸಹಜವಾಗಿಯೇ ಒಂದು ಕ್ಷಣ ಬಿಸಿಸಿಐ ಆತಂಕಕ್ಕೆ ಒಳಗಾಗಿತ್ತು. ಗಿಲ್ ಫಿಟ್ ಆಗಿದ್ದು ಮೂರನೇ ಪಂದ್ಯದಲ್ಲಿ ಆಡಲಿದ್ದಾರೆ. ಸ್ಕ್ಯಾನಿಂಗ್ ವೇಳೆಯೂ ಗಿಲ್ಗೆ ಅಪಾಯವಿಲ್ಲ ಎನ್ನುವುದು ತಿಳಿದುಬಂದಿದೆ.
ಇದನ್ನೂ ಓದಿ IND vs ENG: ಮೂರು ವಿಕೆಟ್ ಕಿತ್ತು ಕನ್ನಡಿಗ ಚಂದ್ರಶೇಖರ್ ದಾಖಲೆ ಮುರಿದ ಅಶ್ವಿನ್
ಗಿಲ್ ಅವರ ಬದಲು ಸೋಮವಾರ ಸರ್ಫರಾಜ್ ಖಾನ್ ಫೀಲ್ಡಿಂಗ್ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಗಿಲ್ ನಾಲ್ಕು ಕ್ಯಾಚ್ ಕೂಡ ಪಡೆದಿದ್ದರು. 11 ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡು ಭಾರಿ ಟೀಕೆಗೆ ಗುರಿಯಾಗಿದ್ದ ಅವರು ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. 147 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 104 ರನ್ ಬಾರಿಸಿದ್ದರು.
ಬಹು ದಿನಗಳ ಬಳಿಕ ಶತಕ ಬಾರಿಸಿದ ಶುಭಮನ್ ಗಿಲ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಟ್ವೀಟ್ ಮೂಲಕ ಮೆಚ್ಚು ಸೂಚಿಸಿದ್ದರು. ಗಿಲ್ ಅವರ ಶತಕದ ಫೋಟೊ ಹಂಚಿಕೊಂಡು, “ಶುಭಮನ್ ಗಿಲ್ ಅವರ ಈ ಇನ್ನಿಂಗ್ಸ್ ಕೌಶಲ್ಯದಿಂದ ತುಂಬಿತ್ತು! ಉತ್ತಮ ಸಮಯ. ಶತತಕ್ಕೆ ಅಭಿನಂದನೆಗಳು!” ಎಂದು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಶತಕದ ಶ್ರೇಯವನ್ನು ಅಯ್ಯರ್ಗೆ ಅರ್ಪಿಸಿದ್ದ ಗಿಲ್
ಗಿಲ್ ಅವರು ಈ ಶತಕವನ್ನು ಅಯ್ಯರ್ಗೆ ಅರ್ಪಿಸಿದ್ದರು. ಏಕೆಂದರೆ ಅಯ್ಯರ್ ರಿವ್ಯೂ ಪಡೆಯುವಂತೆ ಒತ್ತಾಯಿಸದಿದ್ದರೆ ಈ ಶತಕ ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ನಾನು ಈ ಶತಕದ ಶ್ರೆಯವನ್ನು ಅಯ್ಯರ್ಗೆ ಸಲ್ಲಿಸುತ್ತೇನೆ ಎಂದು ಪಂದ್ಯದ ಬಳಿಕ ಹೇಳಿದ್ದರು.
4 ರನ್ ಗಳಿಸಿದ್ದ ವೇಳೆ ಟಾಮ್ ಹಾರ್ಟ್ಲಿ ಎಸೆತದಲ್ಲಿ ಗಿಲ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಅಂಪೈರ್ ಕೂಡ ಔಟ್ ನೀಡಿದರು. ಆದರೆ, ನಾನ್ ಸ್ಟ್ರೈಕ್ನಲ್ಲಿದ್ದ ಶ್ರೇಯಸ್ ಅವರು ಗಿಲ್ಗೆ ರಿವ್ಯೂ ಪಡೆಯುವಂತೆ ಒತ್ತಾಯಿಸಿದರು. ಅಯ್ಯರ್ ಅವರ ಸೂಚನೆಯಂತೆ ಗಿಲ್ ರಿವ್ಯೂ ಪಡೆದಿದ್ದರು. ಈ ವೇಳೆ ಚೆಂಡು ಮೊದಲು ಬ್ಯಾಟ್ಗೆ ಬಡಿದು ಆ ಬಳಿಕ ಪ್ಯಾಡ್ಗೆ ಬಡಿದಿರುವುದು ಕಂಡುಬಂತು. ಅಂಪೈರ್ ತಮ್ಮ ಮನವಿಯನ್ನು ಹಿಂಪಡೆದು ನಾಟ್ ಔಟ್ ತೀರ್ಪು ನೀಡಿದ್ದರು. ಜೀವಾದಾನ ಪಡೆದ ಶತಕ ಬಾರಿಸಿ ಮಿಂಚಿದ್ದರು.