ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ (Pakistan Cricket) ತಂಡದ ಮಾಜಿ ನಿರ್ದೇಶಕ ಮಿಕಿ ಆರ್ಥರ್ (Mickey Arthur) ಇತ್ತೀಚಿನ ಸಂದರ್ಶನವೊಂದರಲ್ಲಿ ಅಲ್ಲಿನ ತಂಡ ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಂಡದ ಆಟಗಾರರು ಪರಸ್ಪರ ಜಗಳವಾಡುವುದೇ ಹಿನ್ನಡೆಗೆ ಕಾರಣ ಎಂದಿದ್ದಾರೆ. ಆಟಗಾರರು ತಮ್ಮ ಕಾಲಿಗೆ ತಾವೇ ಗುಂಡು ಹೊಡೆಯುತ್ತಾರೆ ಎಂದು ವಿಡಂಬನಾತ್ಮಕವಾಗಿ ಹೇಳಿದ್ದಾರೆ. ಆರ್ಥರ್ ಮುಖ್ಯ ತರಬೇತುದಾರರಾಗಿದ್ದ ನಂತರ, ಆರ್ಥರ್ ಕಳೆದ ಏಪ್ರಿಲ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜತೆಗೆ ತಂಡದ ನಿರ್ದೇಶಕರ ಹುದ್ದೆಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಐಸಿಸಿ ವಿಶ್ವಕಪ್ 2023ರ ಕಳಪೆ ಪ್ರದರ್ಶನದ ನಂತರ ಸಹ ತರಬೇತುದಾರರಾದ ಗ್ರಾಂಟ್ ಬ್ರಾಡ್ಬರಿನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರೊಂದಿಗೆ ಅವರನ್ನು ತೆಗೆದುಹಾಕಲಾಯಿತು. ಅವರೀಗ ಪಾಕ್ ತಂಡದೊಳಗಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಅವರು ಆಟಗಾರರ ಒಳಜಗಳದ ಬಗ್ಗೆ ಮಾತನಾಡಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಪರಿಣಾಮಕಾರಿ ಕೋಚಿಂಗ್ಗೆ ಹೆಸರುವಾಸಿಯಾದ ಆರ್ಥರ್, ಪಾಕಿಸ್ತಾನ ಕ್ರಿಕೆಟ್ನೊಳಗಿನ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ ವಿಫಲಗೊಂಡಿದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಕ್ರಿಕೆಟ್ ಎಕೊ ಸಿಸ್ಟಮ್ನಲ್ಲಿ ಸ್ಥಿರತೆ, ನಿರಂತರತೆ ಮತ್ತು ಸರಿಯಾದ ನಿರ್ದೇಶನಗಳ ಕೊರತೆಯು ಸಮಸ್ಯೆಗೆ ಮೂಲ ಕಾರಣ ಎಂದು ಹೇಳಿದ್ದಾರೆ.
ನಾನು ಇಂಜಮಾಮ್ ಉಲ್ ಹಕ್ ಅವರೊಂದಿಗೆ ಕುಳಿತು ತಂಡವನ್ನು ಆಯ್ಕೆ ಮಾಡಿದಾಗ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುಸಿದ್ದೆ. ಇವೆಲ್ಲವೂ ಅಲ್ಲಿ ಮಾಮೂಲು ಹಾಗೂ ಕ್ರಿಕೆಟ್ ಏಳಿಗೆಗೆ ಅಡೆತಡೆಗಳಾಗಿವೆ ಎಂದು ಹೇಳಿದ್ದಾರೆ. ಅಲ್ಲಿನ ಆಟಗಾರರಿಗೆ ವೈಯಕ್ತಿಕ ಗುರಿಯೇ ಹೆಚ್ಚಾಗಿದೆ. ತಂಡದ ಗುರಿಗಳ ಮೇಲೆ ಗಮನ ಇಲ್ಲ ಎಂದು ಹೇಳಿದ್ದಾರೆ.
ಆರ್ಥರ್ ಹತಾಶೆ
ತಂಡದ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳಿವೆ. ನಿರಂತರ ಬದಲಾವಣೆಗಳು ಮತ್ತು ಅಸ್ಥಿರತೆಯೇ ಅದರ ಮೂಲವಾಗಿದೆ ಎಂದು ಲೆಜೆಂಡರಿ ಕೋಚ್ ಆರ್ಥರ್ ಹತಾಶೆ ವ್ಯಕ್ತಪಡಿಸಿದ್ದಅರೆ. ನಿರಂತರ ಬದಲಾವಣೆ ಮತ್ತು ಅಸ್ಥಿರತೆಯ ಸಮಸ್ಯೆಯಾಗಿದೆ. ಆಟಗಾರರು ಸ್ವಯಂ-ರಕ್ಷಣಾ ಮೋಡ್ಗೆ ಹೋಗುತ್ತಾರೆ. ಅವರು ಮುಂದಿನ ಪ್ರವಾಸದ ಮೇಲೆ ಗಮನ ಹರಿಸಿ ತಮಗಾಗಿ ಆಡುತ್ತಾರೆ ಎಂದು ಹೇಳಿದ್ದಾರೆ.
ಆರ್ಥರ್ ಪಾಕಿಸ್ತಾನದ ದೇಶೀಯ ಕ್ರಿಕೆಟ್ನಲ್ಲಿ ಪ್ರತಿಭೆಗಳ ಸಮೃದ್ಧಿಯನ್ನು ಎತ್ತಿ ತೋರಿಸಿದರು. ಆದರೆ, ಅದರ ಸರಿಯಾದ ಬಳಕೆಗೆ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕಾಗಿ ವಿಷಾದಿಸಿದರು. ಉನ್ನತ ಕಾರ್ಯಕ್ಷಮತೆಯ ರಚನೆಯನ್ನು ಯೋಜಿಸಲಾಗಿತ್ತು. ಆದರೆ ಅಧ್ಯಕ್ಷರ ಬದಲಾವಣೆಗಳೊಂದಿಗೆ ಅಲ್ಲಿನ ಕ್ರಿಕೆಟ್ ಭವಿಷ್ಯ ಹಾಳಾಗಿದೆ. ಇದು ತುಂಬಾ ನಿರಾಶಾದಾಯಕ ಎಂದು ಹೇಳಿದ್ದಾರೆ.
ಇದನ್ನೂ ಓದಿ : Pakistan Cricket : ಭಾರತದ ಕ್ರಿಕೆಟ್ ಮಾದರಿಯನ್ನು ನಕಲು ಮಾಡಲು ಮುಂದಾದ ಪಾಕಿಸ್ತಾನ
ದೇಶೀಯವಾಗಿ ಆ ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ ಎಂದು ಆರ್ಥರ್ ಒತ್ತಿ ಹೇಳಿದರು. ಪಾಕಿಸ್ತಾನ ಕ್ರಿಕೆಟ್ ತನ್ನ ಕಾಲಿಗೆ ತಾನೇ ಗುಂಡು ಹಾರಿಸುತ್ತದೆ. ಅದು ಪರಿಹಾರವಾದರೆ ಇನ್ನೂ ಉತ್ತಮವಾಗಬಹುದು ಎಂದು ನಾನು ಇನ್ನೂ ಭಾವಿಸುತ್ತೇನೆ ಎಂದು ಆರ್ಥರ್ ಹೇಳಿದ್ದಾರೆ.
ಮಾಜಿ ಅಧ್ಯಕ್ಷರಿಗೆ ಮೆಚ್ಚುಗೆ
2016 ರಿಂದ 2019 ರವರೆಗೆ ತಮ್ಮ ಅಧಿಕಾರಾವಧಿಯಲ್ಲಿ ಆಗಿನ ಅಧ್ಯಕ್ಷ ನಜಾಮ್ ಸೇಥಿ ಅವರ ಸಕಾರಾತ್ಮಕ ಪರಿಣಾಮವನ್ನು ಒಪ್ಪಿಕೊಂಡರು. ಅವರು ಆಟಗಾರರು ಬೆಳೆಯುವ ವಾತಾವರಣವನ್ನು ಸೃಷ್ಟಿಸಿದರು. ಆದಾಗ್ಯೂ, ನಾಯಕತ್ವದ ಬದಲಾವಣೆಗಳ ನಂತರ ಸಂಪೂರ್ಣ ವ್ಯತಿರಿಕ್ತತ ಪರಿಣಾಮ ಮೂಡಿತು. ಇದು ಪ್ರಾಮಾಣಿಕ ಸಂವಹನದ ಕೊರತೆ ಮತ್ತು ನಿರಂತರ ಅನಿಶ್ಚಿತತೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಸವಾಲುಗಳ ಹೊರತಾಗಿಯೂ, ಆರ್ಥರ್ ಪಾಕಿಸ್ತಾನ ಕ್ರಿಕೆಟ್ನ ಸಂಭಾವ್ಯ ಸುಧಾರಣೆಯ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಉತ್ತಮ ರಚನೆ, ಬಲವಾದ ನಾಯಕತ್ವ ಮತ್ತು ನಿರಂತರತೆ ಮತ್ತು ಸುಸ್ಥಿರತೆಗೆ ಬದ್ಧತೆ ಬೇಕೆಂದು ಹೇಳಿದ್ದಾರೆ. ಸರಿಯಾದ ಕ್ರಮಗಳೊಂದಿಗೆ ಪಾಕಿಸ್ತಾನ ಕ್ರಿಕೆಟ್ ತನ್ನ ಆಂತರಿಕ ಹೋರಾಟಗಳನ್ನು ನಿವಾರಿಸಬಹುದು ಮತ್ತು ಆಧುನಿಕ ಯುಗದಲ್ಲಿ ಅಭಿವೃದ್ಧಿ ಹೊಂದಬಹುದು ಎಂದು ಅನುಭವಿ ಕೋಚ್ ಭರವಸೆ ವ್ಯಕ್ತಪಡಿಸಿದ್ದಾರೆ.