ಮುಂಬಯಿ: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ (Border-Gavaskar Trophy) ಮೂರನೇ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುವುದಿಲ್ಲ ಎಂಬುದಾಗಿ ಬಿಸಿಸಿಐ ಭಾನುವಾರ (ಫೆಬ್ರವರಿ 12ರಂದು) ಸ್ಪಷ್ಟಪಡಿಸಿದೆ. ಈ ಮೂಲಕ ಇದುವರೆಗಿನ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಅದರೆ, ಪಂದ್ಯ ಎಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
ಧರ್ಮಶಾಲಾದ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಹೊಸ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಸಂಪೂರ್ಣ ದುರಸ್ತಿ ಮಾಡಲಾಗಿದೆ. ಕಾಮಗಾರಿ ಮುಗಿದ ಹೊರತಾಗಿಯೂ ಪಿಚ್ ಸಂಪೂರ್ಣವಾಗಿ ಸಿದ್ಧಗೊಳ್ಳದ ಕಾರಣ ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.
ಧರ್ಮಶಾಲಾ ಪಿಚ್ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಫಿಟ್ ಆಗಿಲ್ಲ ಎಂಬ ವರದಿಗಳು ಪ್ರಕಟಗೊಂಡ ಕಾರಣ, ಬಿಸಿಸಿಐ ನಿಯೋಗ ಫೆಬ್ರವರಿ 11ರಂದು ಧರ್ಮಶಾಲಾಗೆ ತೆರಳಿ ಪರಿಶೀಲನೆ ನಡೆಸಿತ್ತು. ಈ ವೇಳೆ ಪಿಚ್ನಲ್ಲಿ ಕುಳಿಗಳು ಕಾಣಿಸಿಕೊಂಡ ಕಾರಣ ಪಂದ್ಯ ಆಯೋಜಿಸಲು ಸೂಕ್ತವಾಗಿಲ್ಲ ಎಂದು ವರದಿ ನೀಡಿದೆ. ಅದರ ಆಧಾರದ ಮೇಲೆ ಬಿಸಿಸಿಐ ಬೇರೆಗೆ ಸ್ಥಳಾಂತರ ಮಾಡಲು ನಿರ್ಧರಿಸಿದೆ. ಅದೇ ರೀತಿ ಕಳೆದ ಫೆಬ್ರವರಿಯಿಂದ ಇದುವರೆಗೆ ಅಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯ ನಡೆದಿರಲಿಲ್ಲ.
ಇದನ್ನೂ ಓದಿ: IND VS AUS: ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ತಾಣ ಬದಲು; ವರದಿ
ಗಜರಾತ್ನ ರಾಜ್ಕೋಟ್ ಹಾಗೂ ಮಧ್ಯಪ್ರದೇಶದ ಇಂದೋರ್ ಪಂದ್ಯ ಆಯೋಜನೆ ಮಾಡಲು ಇರುವ ಪರ್ಯಾಯ ಸ್ಥಳಗಳಾಗಿವೆ. ಇವೆರಡರಲ್ಲಿ ಒಂದನ್ನು ಬಿಸಿಸಿಐ ಶೀಘ್ರವೇ ನಿರ್ಧರಿಸಲಿದೆ. 2016-17ರಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡದ ಧರ್ಮಶಾಲಾ ಪಿಚ್ನಲ್ಲಿ ಎಂಟು ವಿಕೆಟ್ಗಳ ವಿಜಯ ಸಾಧಿಸಿತ್ತು. ಹೀಗಾಗಿ ಇದು ಭಾರತಕ್ಕೆ ಫೇವರಿಟ್ ಪಿಚ್ ಎನಿಸಿತ್ತು.