ಮುಂಬಯಿ : ಕೆ. ಎಲ್ ರಾಹುಲ್ ನೇತೃತ್ವದ ಭಾರತ ತಂಡ ಬಾಂಗ್ಲಾದೇಶ ಪ್ರವಾಸದ ಟೆಸ್ಟ್ ಸರಣಿಯಲ್ಲಿ (INDvsBAN) ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಮೊದಲ ಪಂದ್ಯವನ್ನು 188 ರನ್ಗಳಿಂದ ಗೆದ್ದಿದ್ದರೆ ಎರಡನೇ ಪಂದ್ಯದಲ್ಲಿ 3 ವಿಕೆಟ್ ವೀರೋಚಿತ ವಿಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೇರುವ ಅವಕಾಶ ಹೆಚ್ಚಾಗಿದೆ.
ಮೊದಲ ಪಂದ್ಯದಲ್ಲಿ ಭಾರತ ತಂಡ 188 ರನ್ಗಳ ಬೃಹತ್ ಜಯ ದಾಖಲಿಸಿದ್ದ ಕಾರಣ ಶೇಕಡಾವಾರು ಅಂಕ ಹೆಚ್ಚಾಗಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯ ಹೊರತಾಗಿಯೂ ಗೆಲುವಿಗಾಗಿ ಭಾರತ ತಂಡ ಪರದಾಡಿತ್ತು. ಆರ್. ಅಶ್ವಿನ್ ಕೆಚ್ಚೆದೆಯ ಪ್ರದರ್ಶನ ನೀಡಿ 42 ರನ್ ಬಾರಿಸದೇ ಹೋಗಿದ್ದರೆ ತಂಡ ಸೋಲುತ್ತಿತ್ತು. ಬಾಂಗ್ಲಾದೇಶ ಬೌಲರ್ ಮೆಹೆದಿ ಹಸನ್ ಮಿರಾಜ್ ಭಾರತದ ಪ್ರಮುಖ ವಿಕೆಟ್ಗಳನ್ನು ಕಬಳಿಸುವ ಮೂಲಕ ಆತಂಕ ತಂದೊಡ್ಡಿದ್ದರು. ಹೀಗಾಗಿ ಶೇಕಡಾವಾರು ಅಂಕಗಳಲ್ಲಿ ಕುಸಿತ ಕಂಡಿತು.
ಆಸ್ಟ್ರೇಲಿಯಾ ತಂಡ ಶೇಕಡಾ 78 ಅಂಕಗಳೊಂದಿಗೆ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ ಭಾರತ 58.93 ಅಂಕಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ತಂಡ 54.55 ಅಂಕಗಳನ್ನು ಪಡೆದುಕೊಂಡಿದೆ. ಈ ಮೂರು ತಂಡಗಳಲ್ಲಿ ಆಸ್ಟ್ರೇಲಿಯಾದ ಫೈನಲ್ ಅವಕಾಶ ಬಹುತೇಕ ಖಚಿತವಾಗಿದೆ. ಆದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪ್ರಬಲ ಪೈಪೋಟಿಯಿದೆ.
ಭಾರತಕ್ಕೆ ಮುಂದಿನ ಸರಣಿ ಪ್ರವಾಸಿ ಆಸ್ಟ್ರೇಲಿಯಾ ತಂಡ ವಿರುದ್ಧ. ಇಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದರೆ ಫೈನಲ್ ಎಂಟ್ರಿ ಗ್ಯಾರಂಟಿ. ಒಂದು ವೇಳೆ 3-1 ಅಥವಾ 3-0 ಅಂತರದ ವಿಜಯ ದೊರೆತರೂ ಫೈನಲ್ಗೇರಬಹುದು. ಇಂಥ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಇನ್ನುಳಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಜಯ ಗಳಿಸಲೇಬೇಕು. ಆ ತಂಡಕ್ಕೆ ಮೊದಲೆರಡು ಪಂದ್ಯಗಳು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ. ಹೀಗಾಗಿ ಭಾರತ ತಂಡಕ್ಕೆ ಅವಕಾಶ ಹೆಚ್ಚಿದೆ.
ಇದನ್ನೂ ಓದಿ | INDvsBAN | ಎರಡನೇ ಪಂದ್ಯದಲ್ಲಿ 3 ವಿಕೆಟ್ ಜಯ ; ಬಾಂಗ್ಲಾದೇಶ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತ