Site icon Vistara News

T20 World Cup | ಈ ಬಾರಿಯ ಟಿ20 ವಿಶ್ವ ಕಪ್‌ ಈ ಹೊಸ ನಿಯಮಗಳಂತೆ ನಡೆಯಲಿದೆ, ಅವು ಯಾವುವು?

t20 world cup

ದುಬೈ : ಪ್ರಸಕ್ತ ಆವೃತ್ತಿಯ ಟಿ೨೦ ವಿಶ್ವ ಕಪ್‌ (T20 World Cup) ಬದಲಾದ ನಿಯಮಗಳೊಂದಿಗೆ ನಡೆಯಲಿದ್ದು, ಆಟಗಾರರು ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಕಳೆದ ತಿಂಗಳು ಈ ನಿಯಮಗಳನ್ನು ಜಾರಿಗೆ ತಂದಿದೆ. ಅಂತೆಯೇ ಅಕ್ಟೋಬರ್‌ ೧ರಿಂದಲೇ ನಿಯಮಗಳು ಅನ್ವಯಗೊಂಡಿದೆ. ಆದರೆ, ಹೊಸ ನಿಯಮಗಳ ಪ್ರಕಾರ ನಡೆಯುವ ಮೊದಲ ಟೂರ್ನಿ ಟಿ೨೦ ವಿಶ್ವ ಕಪ್. ಪ್ರಮುಖವಾಗಿ ಚೆಂಡಿಗೆ ಹೊಳಪು ನೀಡಲು ಎಂಜಲು ಹಚ್ಚುವ ಕ್ರಮವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಂಕಡ್‌ ಔಟ್‌ಗೆ ನಿಯಮದ ಮಾನ್ಯತೆ ಲಭಿಸಿದ್ದು ಇನ್ನು ಮುಂದೆ ರನ್‌ಔಟ್‌ ಎಂದೇ ಪರಿಗಣಿಸಲಾಗುತ್ತದೆ.

ಎಂಜಲು ಸಂಪೂರ್ಣ ಬ್ಯಾನ್‌

ಫೀಲ್ಡಿಂಗ್ ಮಾಡುವ ತಂಡ ಚೆಂಡಿಗೆ ಹೊಳಪು ನೀಡುವ ಉದ್ದೇಶದಿಂದ ಎಂಜಲು ಹಚ್ಚುತ್ತಿದ್ದ ಪದ್ಧತಿಯನ್ನು ಕೊರೊನಾ ವಕ್ಕರಿಸಿದ ಸಂದರ್ಭದಲ್ಲಿ ನಿಷೇಧ ಮಾಡಲಾಗಿತ್ತು. ಅದನ್ನೀಗ ಕಾಯಂ ಮಾಡಿದ್ದು ಇನ್ನು ಮುಂದೆ ಬೌಲರ್‌ಗಳು ಎಂಜಲು ಬಳಸುವುದು ನಿಯಮಬಾಹಿರವಾಗಿರುತ್ತದೆ. ಹೀಗಾಗಿ ವಿಶ್ವ ಕಪ್‌ನಲ್ಲಿ ಬೌಲರ್‌ಗಳು ಚೆಂಡಿಗೆ ಎಂಜಲು ಹಚ್ಚುವಂತಿಲ್ಲ.

ಕ್ಯಾಚ್‌ ಔಟ್‌ ಮತ್ತು ಬ್ಯಾಟಿಂಗ್

ಇನ್ನು ಮುಂದೆ ಕ್ಯಾಚ್‌ ಔಟ್‌ ಆದ ಬಳಿಕ ಆಡಲು ಇಳಿಯುವ ಬ್ಯಾಟರ್‌ ನೇರವಾಗಿ ಬಂದು ಬ್ಯಾಟ್‌ ಮಾಡಬೇಕು. ಈ ಹಿಂದೆ ಔಟಾಗುವ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್‌ ಪಿಚ್‌ನ ಅರ್ಧಭಾಗ ಓಡಿದ್ದರೆ ಬ್ಯಾಟ್‌ ಮಾಡುವ ಅವಕಾಶ ಲಭಿಸುತ್ತಿತ್ತು. ಕೆಲವೊಂದು ಬಾರಿ ಇದರಿಂದ ತಂಡಕ್ಕೆ ಲಾಭವಾಗುತ್ತಿತ್ತು. ಆದರೆ, ಇನ್ನು ಮುಂದೆ ಹೊಸ ಬ್ಯಾಟರ್‌ ಆಟ ಮುಂದುವರಿಸಬೇಕಾಗುತ್ತದೆ.

ಒಂದೂವರೆ ನಿಮಿಷದಲ್ಲಿ ಕ್ರೀಸ್‌ನಲ್ಲಿರಬೇಕು

ಒಬ್ಬ ಬ್ಯಾಟರ್‌ ಔಟಾದ ಬಳಿಕ ಬರುವ ಹೊಸ ಬ್ಯಾಟರ್‌ ೯೦ ಸೆಕೆಂಡ್‌ಗಳ ಒಳಗೆ ರೆಡಿಯಾಗಿ ಬಂದು ಬ್ಯಾಟ್‌ ಮಾಡಬೇಕು. ತಡವಾಗಿ ಬಂದರೆ ಆತ ಔಟ್‌.

ಮಂಕಡ್‌ಗೆ ಮಾನ್ಯತೆ

ಬೌಲಿಂಗ್‌ ಮಾಡುವ ಮೊದಲೇ ನಾನ್‌ ಸ್ಟ್ರೈಕ್‌ ಎಂಡ್‌ನಲ್ಲಿರುವ ಬ್ಯಾಟರ್‌ ಕ್ರೀಸ್‌ ಬಿಟ್ಟು ಹೊರಕ್ಕೆ ಹೋಗಿದ್ದು, ಅವರನ್ನು ಬೌಲರ್‌ ಔಟ್‌ ಮಾಡಿದರೆ ಮಂಕಡಿಂಗ್‌ ಎಂದು ಹೇಳಲಾಗುತ್ತಿತ್ತು.ಹೀಗಾಗಿ ಮಂಕಂಡಿಂಗ್‌ಗೆ ಇನ್ನು ನಿಯಮದ ಮಾನ್ಯತೆ ದೊರಕಿದೆ. ನಾನ್‌ಸ್ಟ್ರೈಕ್‌ನಲ್ಲಿರುವ ಬ್ಯಾಟರ್‌ಗಳು ಬೌಲರ್‌ಗಳ ಮೇಲೆ ಕಣ್ಣಿಟ್ಟಿರಬೇಕಾಗುತ್ತದೆ.

ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಡುವಂತಾದರೆ ಡೆಡ್‌ಬಾಲ್‌

ಬೌಲರ್‌ ಎಸೆಯುವ ಚೆಂಡನ್ನು ಬಾರಿಸಲು ಬ್ಯಾಟರ್‌ ಕ್ರೀಸ್ ಬಿಟ್ಟು ಆಚೆ ಹೋಗುವಂತಾದರೆ ಅದನ್ನು ಡೆಡ್‌ ಬಾಲ್ ಎಂದು ಪರಿಗಣಿಸಲು ಐಸಿಸಿ ನಿರ್ಧರಿಸಿದೆ. ಈ ಹಿಂದೆ ಬೌಲರ್‌ ಕೈಯಿಂದ ಜಾರಿದ ಚೆಂಡನ್ನು ಬಾರಿಸಲು ಬ್ಯಾಟರ್‌ಗೆ ಅವಕಾಶವಿತ್ತು. ಅದಕ್ಕೀಗ ನಿಯಂತ್ರಣ ಹೇರಲಾಗಿದೆ.

೫ ರನ್‌ಗಳ ಪೆನಾಲ್ಟಿ

ಬೌಲರ್‌ ಅಥವಾ ಫೀಲ್ಡರ್‌ ಉದ್ದೇಶಪೂರ್ವಕವಾಗಿ ಬ್ಯಾಟರ್‌ಗಳಿಗೆ ತೊಂದರೆ ಕೊಟ್ಟರೆ ಅದನ್ನು ತಪ್ಪು ಎಂದು ಪರಿಗಣಿಸುವ ಅಧಿಕಾರ ಅಂಪೈರ್‌ಗಳಿಗೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದರೆ ಎದುರಾಳಿ ತಂಡಕ್ಕೆ ಐದು ಅಂಕಗಳನ್ನು ಅಂಪೈರ್‌ ಕೊಡಲಿದ್ದಾರೆ.

ಸ್ಲೋ ಓವರ್ ದಂಡ

ಐಸಿಸಿಯ ಹೊಸ ನಿಯಮದ ಪ್ರಕಾರ ತಂಡವೊಂದು ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸಬೇಕು. ಇಲ್ಲದಿದ್ದರೆ, ಉಳಿದ ಓವರ್‌ಗಳಲ್ಲಿ ೩೦ ಯಾರ್ಡ್‌ ಸರ್ಕಲ್‌ಗಿಂತ ಆಚೆ ಇರುವ ಫೀಲ್ಡರ್‌ ಒಬ್ಬನನ್ನು ಕಡಿತ ಮಾಡುವ ಅಧಿಕಾರ ಅಂಪೈರ್‌ಗೆ ನೀಡಲಾಗಿದೆ.

ಇದನ್ನೂ ಓದಿ |T20 World Cup | ವಿಶ್ವ ಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಟೀಮ್​ ಇಂಡಿಯಾ ಆಟಗಾರು ಯಾರು?

Exit mobile version