Site icon Vistara News

Muhammad Rizwan: ಲಂಕಾ ವಿರುದ್ಧದ ಗೆಲುವನ್ನು ಗಾಜಾ ಜನತೆಗೆ ಅರ್ಪಿಸಿದ ರಿಜ್ವಾನ್

mohammad rizwan

ಹೈದರಾಬಾದ್​: ಮಂಗಳವಾರ ನಡೆದ ವಿಶ್ವಕಪ್​ನ 8ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ದಾಖಲೆಯ 6 ವಿಕೆಟ್​ ಗೆಲುವು ಸಾಧಿಸಿತು. ಈ ಗೆಲುವನ್ನು ಶತಕ ವೀರ ಮೊಹಮ್ಮದ್ ರಿಜ್ವಾನ್ ಅವರು ಇಸ್ರೇಲ್​ ದಾಳಿಗೊಳಗಾಗಿರುವ ಗಾಜಾದ ಜನರಿಗೆ ಅರ್ಪಿಸಿದ್ದಾರೆ. ಇಸ್ರೇಲ್‌ ಮೇಲೆ ಗಾಜಾಪಟ್ಟಿಯ ಉಗ್ರರು ಸಾವಿರಾರು ರಾಕೆಟ್‌ಗಳೊಂದಿಗೆ ದಾಳಿ ನಡೆಸಿದ್ದು, ಸಾವಿರಾರು ಜನ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಇಸ್ರೇಲ್‌ ಕೂಡ ಗಾಜಾಪಟ್ಟಿ ಮೇಲೆ ನಿರಂತರವಾಗಿ ದಾಳಿ (Israel Palestine War) ನಡೆಸುತ್ತಿದೆ.

ಗೆಲುವಿನ ಬಳಿಕ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ರಿಜ್ವಾನ್​, ‘ಈ ಗೆಲುವು ಗಾಜಾದಲ್ಲಿ ಕಷ್ಟದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ ಅರ್ಪಣೆ. ಗೆಲುವಿನಲ್ಲಿ ಕೊಡುಗೆ ನೀಡಿದ್ದು ಸಂತೋಷ ತಂದಿದೆ. ಇಡೀ ತಂಡದ ಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ಚೊಚ್ಚಲ ಪಂದ್ಯ ಆಡಿದ ಅಬ್ದುಲ್ಲಾ ಶಫೀಕ್ ಅವರಿಗೆ ಹೆಚ್ಚಿನ ಶ್ರೇಯ ಸಲ್ಲಬೇಕು. ಅದ್ಭುತ ಆತಿಥ್ಯ ಮತ್ತು ಬೆಂಬಲ ನೀಡಿದ ಹೈದರಾಬಾದ್‌ ಜನರಿಗೆ ತುಂಬಾ ಕೃತಜ್ಞರಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

3 ಸಾವಿರ ದಾಟಿದ ಸಾವಿನ ಸಂಖ್ಯೆ

ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ಯುದ್ಧ ಆರಂಭಿಸಿಲ್ಲ. ಆದರೆ ಮುಗಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ PAK vs SL: ಬೌಂಡರಿ ಗೆರೆಯ ಕಳ್ಳಾಟವಾಡಿ ಲಂಕಾ ವಿರುದ್ಧ ಗೆದ್ದಿತೆ? ಪಾಕಿಸ್ತಾನ?

ಈ ಪಂದ್ಯದಲ್ಲಿ ಗಾಯದ ಮಧ್ಯೆಯೂ ಹೋರಾಡಿದ ರಿಜ್ವಾನ್​ 121 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ ಅಜೇಯ 131 ರನ್​ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ಅಬ್ದುಲ್ಲಾ ಶಫೀಕ್ 113 ರನ್​ ಬಾರಿಸಿದರು. ಹೈದರಾಬಾದ್‌ನ ಬ್ಯಾಟಿಂಗ್‌ ಸ್ನೇಹಿ ಟ್ರ್ಯಾಕ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 344 ರನ್‌ ಪೇರಿಸಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸಿಂಗ್‌ ನಡೆಸಿ ಪಾಕಿಸ್ತಾನ 48.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 348 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಅಜೇಯ ಓಟವನ್ನು ಕಾಯ್ದುಕೊಂಡಿದೆ.

ಇಸ್ರೇಲ್‌ಗೆ ಭಾರತ ಬೆಂಬಲ

ಇಸ್ರೇಲ್‌ಗೆ ಭಾರತ ಬೆಂಬಲ ಘೋಷಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ, ಇಸ್ರೇಲ್ ಮತ್ತು ಹಮಾಸ್ ಮಧ್ಯೆ ನಡೆಯುತ್ತಿರುವ ಕಾಳಗದ ಕುರಿತು ವಿಸ್ತಾರ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಂಚಿಕೊಂಡಿದ್ದಾರೆ. ತಮ್ಮ ದೂರವಾಣಿ ಸಂಭಾಷಣೆ ವೇಳೆ, ಈ ಸಂಕಷ್ಟದ ಸ್ಥಿತಿಯ್ಲಲಿ ಭಾರತವು ಇಸ್ರೇಲ್ ಜತೆಗೆ ನಿಲ್ಲಲಿದೆ. ಭಾರತವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಅವರಿಗೆ ತಿಳಿಸಿದ್ದಾರೆ.

Exit mobile version