ಶ್ರೀನಗರ : ಭಾರತ ಕ್ರಿಕೆಟ್ ತಂಡದಲ್ಲಿ ಯುವ ವೇಗಿಯೊಬ್ಬರು ಖ್ಯಾತಿ ಗಳಿಸುತ್ತಿದ್ದಾರೆ. ಅವರೇ ಜಮ್ಮು- ಕಾಶ್ಮೀರ ಮೂಲದ ವೇಗದ ಬೌಲರ್ ಉಮ್ರಾನ್ ಮಲಿಕ್. ಸರಾಸರಿ ೧೫೦ ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯದ ಮೂಲಕ ಅವರು ಎಲ್ಲರೂ ತಮ್ಮತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಇಂತಿಪ್ಪ ಆಟಗಾರ ಪ್ರಸ್ತುತ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಭಾರತ ಏಕ ದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದು, ಮೊದಲ ಪಂದ್ಯದಲ್ಲೇ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತೆಯೇ ಅವರು ಪಂದ್ಯದಲ್ಲಿ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಅವರ ಕುಟುಂಬದ ಸದಸ್ಯರು ಅತಿಯಾಗಿ ಸಂಭ್ರಮಿಸಿದ್ದಾರೆ. ಆ ವಿಡಿಯೊಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.
ಪಂದ್ಯದಲ್ಲಿ ಅವರು ನ್ಯೂಜಿಲ್ಯಾಂಡ್ ತಂಡದ ಡೆವೋನ್ ಕಾನ್ವೆ ಅವರ ವಿಕೆಟ್ ಅನ್ನು ಪಡೆದಿದ್ದರು. ಅವರ ಅತಿ ವೇಗದ ಎಸೆತಕ್ಕೆ ಯಾಮಾರಿದ ಕಾನ್ವೆ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಅದು ಏಕ ದಿನ ಅಂತಾರಾಷ್ಟ್ರಿಯ ಮಾದರಿಯಲ್ಲಿ ಅವರ ಪಾಲಿನ ಮೊದಲ ವಿಕೆಟ್. ವಿಕೆಟ್ ತಮ್ಮದಾಗುತ್ತಿದ್ದಂತೆ ಉಮ್ರಾನ್ ಮಲಿಕ್ ಮೈದಾನದಲ್ಲಿ ಸಂತಸ ವ್ಯಕ್ತಪಡಿಸಿದ್ದರು.
ಉಮ್ರಾನ್ ಅವರು ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಅವರು ಕುಟುಂಬ ಸದಸ್ಯರು ಕುಣಿದು ಕುಪ್ಪಳಿಸಿದ್ದಾರೆ. ಸಹೋದರ, ತಂದೆ ತಾಯಿ ಹಾಗೂ ಇಬ್ಬರು ಸಹೋದರಿಯರು ಹರ್ಷದಿಂದ ಕೇಕೆ ಹಾಕಿದ್ದಾರೆ. ಈ ವಿಡಿಯೊಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತಗೊಂಡಿವೆ.
ಭಾರತಕ್ಕೆ ಭವಿಷ್ಯದಲ್ಲಿ ಅತ್ಯುತ್ತಮ ಬೌಲರ್ ಒಬ್ಬ ದೊರಕಿದ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಉಮ್ರಾನ್ ಮಲಿಕ್ ಭವಿಷ್ಯದಲ್ಲಿ ಸ್ಟಾರ್ ಬೌಲರ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೊಗಳಿಕೆ ವ್ಯಕ್ತಪಡಿಸಿದ್ದಾರೆ.
ಉಮ್ರಾನ್ ಮಲಿಕ್ ಮೊದಲ ಪಂದ್ಯದಲ್ಲಿ ೬೬ ರನ್ ನೀಡಿ ೨ ವಿಕೆಟ್ ಪಡೆದಿದ್ದಾರೆ. ಭಾನುವಾರ ನಡೆಯುವ ಎರಡನೇ ಪಂದ್ಯದಲ್ಲಿ ಇನ್ನಷ್ಟು ವಿಕೆಟ್‌ಗಳನ್ನು ತಮ್ಮದಾಗಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಇದನ್ನೂ ಓದಿ | Ireland Tour: ಉಮ್ರಾನ್‌ಗೆ ಕೊನೇ ಓವರ್ ಕೊಟ್ಟಿದ್ದು ಕರೆಕ್ಟ್ ಆಗಿದೆ ಎಂದ ನಾಯಕ ಹಾರ್ದಿಕ್