Site icon Vistara News

Thomas Cup 2024: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್​ ಭಾರತ

Thomas Cup 2024

ಚೆಂಗ್ಡು (ಚೀನಾ): ಇಲ್ಲಿ ನಡೆಯುತ್ತಿರುವ ಥಾಮಸ್‌ ಕಪ್‌(Thomas Cup 2024) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ(Indian men’s Badminton team) ತಂಡದ ಗೆಲುವಿನ ನಾಗಲೋಟ ಮುಂದುವರಿದಿದೆ. ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 5-0 ಅಂತರದಿಂದ ಹಿಮ್ಮೆಟ್ಟಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಎಂಟರ ಘಟ್ಟಕ್ಕೆ ಮುನ್ನಡೆದಿದೆ. ಬುಧವಾರ ನಡೆಯುವ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಕಣಕ್ಕಿಳಿಯಲಿದೆ.

ಎಚ್‌.ಎಸ್‌.ಪ್ರಣಯ್ 21-15, 21-15ರಲ್ಲಿ ನೇರ ಗೇಮ್‌ಗಳಿಂದ ಹ್ಯಾರಿ ಹುವಾಂಗ್ ಅವರನ್ನು ಸೋಲಿಸಿ ಭಾರತಕ್ಕೆ (1-0) ಆರಂಭಿಕ ಮುನ್ನಡೆ ಒದಗಿಸಿದರು. ಆ ಬಳಿಕ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಡಬಲ್ಸ್‌ ವಿಭಾಗದಲ್ಲಿ ಬೆನ್‌ ಲೇನ್ ಮತ್ತು ಸೀನ್‌ ವೆಂಡಿ ಅವರನ್ನು ಮೂರು ಗೇಮ್​ಗಳ ಹೋರಾಟದಲ್ಲಿ ಮಣಿಸಿ 2-0 ಮುನ್ನಡೆ ತಂದರು. ಗೆಲುವಿನ ಅಂತರ 21-17, 19-21, 21-15.

ಮೂರನೇ ಪಂದ್ಯದಲ್ಲಿ ಅನುಭವಿ ಕಿದಂಬಿ ಶ್ರೀಕಾಂತ್‌ 21-16, 21-11 ರಿಂದ ನದೀಮ್ ದಲ್ವಿ ಅವರನ್ನು ಸೋಲಿಸಿ ತಂಡಕ್ಕೆ 3-0 ಗೆಲುವಿನ ಮುನ್ನಡೆ ಒದಗಿಸಿದರು. ಭಾರತದ ಎರಡನೇ ಡಬಲ್ಸ್‌ ತಂಡವಾದ ಎಂ.ಆರ್‌.ಅರ್ಜುನ್‌- ಧ್ರುವ್ ಕಪಿಲಾ ಜೋಡಿ 21-7, 21-19 ರಿಂದ ರೋರಿ ಎಸ್ಟನ್‌- ಅಲೆಕ್ಸ್‌ ಗ್ರೀನ್ ಜೋಡಿಯನ್ನು ಸೋಲಿಸಿತು. ಸಂಪೂರ್ಣವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿದ ಭಾತರ ಅಂತಿಮ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿಯೂ ಗೆಲುವಿನಿ ನಗೆ ಬೀರಿತು. 24 ವರ್ಷದ ಕಿರಣ್ ಜಾರ್ಜ್ 21-18, 21-12ರಲ್ಲಿ ನೇರ ಗೇಮ್‌ಗಳಿಂದ ಚೋಳನ್ ಕಾಯನ್ ಅವರನ್ನು ಸೋಲಿಸಿದರು.‌ ಮೊದಲ ಪಂದ್ಯದಲ್ಲಿ ಭಾರತ 4-1 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿತ್ತು.

ಇದನ್ನೂ ಓದಿ Fighter Movie: ಪಿ.ವಿ.ಸಿಂಧು ಗಮನ ಸೆಳೆದ ‘ಫೈಟರ್‌’; ಚಿತ್ರದ ಬಗ್ಗೆ ಬ್ಯಾಡ್ಮಿಂಟನ್‌ ತಾರೆ ಹೇಳಿದ್ದೇನು?

ಮಹಿಳಾ ತಂಡ ಕೂಡ ಕ್ವಾರ್ಟರ್​ ಫೈನಲ್​ಗೆ


ಭಾರತದ ಮಹಿಳಾ ತಂಡ ಕೂಡ ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ಭಾನುವಾರ ನಡೆದಿದ್ದ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತವು ಸಿಂಗಾಪುರ ತಂಡವನ್ನು 4-1 ಗೋಲುಗಳಿಂದ ಮಣಿಸಿ ಈ ಸಾಧನೆ ಮಾಡಿತ್ತು. ಆರಂಭಿಕ ಪಂದ್ಯದಲ್ಲಿ ಅಶ್ಮಿತಾ ಚಾಲಿಹಾ ಅವರ ಸೋಲಿನಿಂದ ಚೇತರಿಸಿಕೊಂಡ ಭಾರತ, ಉಳಿದ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿತ್ತು.

Exit mobile version