Site icon Vistara News

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

Thomas Cup 2024

ಚೆಂಗ್ಡು(ಚೀನಾ): ಸತತ 2ನೇ ಬಾರಿ ಥಾಮಸ್‌ ಕಪ್‌(Thomas Cup 2024) ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಭಾರತ ಪುರುಷರ ಬ್ಯಾಡ್ಮಿಂಟನ್​ ತಂಡ ಕ್ವಾರ್ಟರ್​ ಫೈನಲ್​ನಲ್ಲಿ ಚೀನಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿದೆ. ಇದಕ್ಕೂ ಮುನ್ನ ನಡೆದ ಉಬೆರ್‌ ಕಪ್‌(Uber Cup 2024) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಕೂಡ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡಿತ್ತು. ಉಭಯ ತಂಡಗಳು ಕೂಡ ಸೋಲು ಕಾಣುವ ಮೂಲಕ ಭಾರತದ ಪದಕ ನಿರೀಕ್ಷೆ ಹುಸಿಯಾಯಿತು.

ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪ್ರಣಯ್ 15-21 21-11 21-14 ತೀವ್ರ ಹೋರಾಟ ನಡೆಸಿದರೂ ಶಿ ಯು ಕಿ ವಿರುದ್ಧ ಸೋಲು ಕಂಡರು. ಆ ಬಳಿಕ ಆಡಿದ ಡಬಲ್ಸ್​ನಲ್ಲಿ ಬರವಸೆಯ ಜೋಡಿ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಶೆಟ್ಟಿ 21-15 11-21 21-12 ಅಂತರದಿಂದ ಲಿಯಾಂಗ್ ವೀ ಕೆಂಗ್- ವಾಂಗ್ ಚಾಂಗ್ ಜೋಡಿ ವಿರುದ್ಧ ಸೋತರು. ಭಾರತಕ್ಕೆ ಗೆಲುವಿನ ಖಾತೆ ತೆರೆದದ್ದು ಲಕ್ಷ್ಯ ಸೇನ್‌ ಮಾತ್ರ. 2ನೇ ಸಿಂಗಲ್ಸ್​ನಲ್ಲಿ ಆಡಿದ ಸೇನ್ ಗೆಲುವು ಸಾಧಿಸಿ ಪಂದ್ಯವನ್ನು ಜೀವಂತವಿರಿಸಿದರು. ಆದರೆ 4ನೇ ಪಂದ್ಯದಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಸೋಲುವುದರೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿತು. ಈ ಪಂದ್ಯದಲ್ಲಿ ಗೆಲ್ಲುತ್ತಿದ್ದರೆ 2-2 ಸಮಬಲ ಸಾಧಿಸಿ ಅಂತಿಮ ಹೋರಾಟಲ್ಲಿ ಗೆಲ್ಲುವ ಅವಕಾಶವಿತ್ತು.

ಮಹಿಳೆಯರಿಗೂ ಸೋಲು

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್​ ಫೈನಲ್(Uber Cup 2024 Quarterfinal)​ ಪಂದ್ಯದಲ್ಲಿ ಭಾರತದ(India) ಮಹಿಳಾ ತಂಡ ಜಪಾನ್(Japan)​ ವಿರುದ್ಧ 3-0 ಅಂತರದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು.

ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 10-21, 22-20, 15-21 ರಲ್ಲಿ ಅಯಾ ಒಹೊರಿ ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸಪಟ್ಟ ಚಲಿಹಾ ಎರಡನೇ ಗೇಮ್​ನಲ್ಲಿ ತಿರುಗಿ ಬಿದ್ದು 22-20 ಅಂತರದಿಂದ ಕೈವಶ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಸೋಲು ಕಂಡರು.

ಡಬಲ್ಸ್​ನಲ್ಲಿ ಕೆ.ಪ್ರಿಯಾ-ಶ್ರುತಿ ಮಿಶ್ರಾ ಜೋಡಿಯನ್ನು ನಮಿ ಮತ್ಸುಯಾಮಾ-ಚಿಹರು ಶಿದಾ ಸೇರಿಕೊಂಡು 8-21, 9-21 ನೇರ ಗೇಮ್​ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಮಹಿಳಾ ಸಿಂಗಲ್ಸ್​ನಲ್ಲಿ ಇಶಾರಾಣಿ ಶಾರಾಣಿ ಬರುಹಾ ಅವರನ್ನು 15-21, 12-21 ನೇರ ಗೇಮ್​ಗಳ ಅಂತದಿಂದ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಮಣಿಸಿದರು. ಈ ಸೋಲಿನೊಂದಿಗೆ ಭಾರತ ತಂಡದ ಸವಾಲು ಕೂಡ ಅತ್ಯಂಗೊಂಡಿತು.

Exit mobile version