ಮೀರ್‌ಪುರ : ಭಾರತ ಕ್ರಿಕೆಟ್ ತಂಡಕ್ಕೆ ಬುಧವಾರ ಅತ್ಯಂತ ಕೆಟ್ಟ ದಿನ. ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯದ ವೇಳೆ ಒಟ್ಟಾರೆ ಮೂವರು ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರು ಪದೇಪದೆ ಗಾಯದ ಸಮಸ್ಯೆಯಲ್ಲಿ ಸಿಲುಕುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ಸಿಕ್ಕಿತು.
ಬುಧವಾರದ ಪಂದ್ಯಕ್ಕೆ ಮೊದಲು ವೇಗದ ಬೌಲರ್ ಕುಲ್ದೀಪ್ ಸೇನ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಘೋಷಿಸಿತ್ತು. ಅವರ ಅಲಭ್ಯತೆ ಹಿನ್ನೆಲೆಯಲ್ಲಿ ಜಮ್ಮು ಎಕ್ಸ್‌ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್ ಅವರು ತಂಡದಲ್ಲಿ ಸ್ಥಾನ ಪಡೆಕೊಂಡರು. ಪಂದ್ಯದ ನಡುವೆ ನಾಯಕ ರೋಹಿತ್ ಶರ್ಮ ಅವರು ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.
ಕ್ಯಾಚೊಂದನ್ನು ಹಿಡಿಯಲು ಯತ್ನಿಸಿದ ಅವರ ಹೆಬ್ಬೆರಳಿಗೆ ಚೆಂಡು ಬಿದ್ದ ಕಾರಣ ವಿಪರೀತ ನೋವು ಅನುಭವಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವಾಪಸ್ ಬರುವಾಗ ಅವರ ಕೈಗೆ ದೊಡ್ಡ ಗಾತ್ರದ ಬ್ಯಾಂಡೇಜ್ ಹಾಕಿದ್ದು ಕಂಡು ಬಂದಿತ್ತು.
ಇವೆಲ್ಲದರ ನಡುವೆ ವೇಗದ ಬೌಲರ್ ದೀಪಕ್ ಚಾಹರ್ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಬೌಲಿಂಗ್ ಮಾಡುವ ಮಾಡುವ ವೇಳೆ ಅವರು ಕಾಲು ನೋವಿಗೆ ಒಳಗಾಗಿದ್ದರು. ಹೀಗಾಗಿ ೩ ಓವರ್ ಮುಗಿಸಿದ ಅವರು ಪೆವಿಲಿಯನ್ ಸೇರಿಕೊಂಡಿದ್ದರು. ಹೀಗಾಗಿ ಭಾರತ ತಂಡ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿತು.
ಇದನ್ನೂ ಓದಿ | Team India | ಭಾರತಕ್ಕೆ ಐಸಿಸಿ ಟ್ರೋಫಿಗಳು ಮರೀಚಿಕೆ; ಚೋಕರ್ಸ್ ಆಯಿತೇ ಟೀಮ್ ಇಂಡಿಯಾ?