ಬರ್ಮಿಂಗ್ಹಮ್ : ಇಂಗ್ಲೆಂಡ್‌ನ ಬರ್ಮಿಂಗ್ಹಮ್‌ನಲ್ಲಿ (CWG- 2022) ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳಿದ್ದ ಶ್ರೀಲಂಕಾದ ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿರಬಹುದು ಎಂದು ಹೇಳಲಾಗಿದ್ದು, ಸ್ಥಳೀಯ ಪೊಲೀಸರು ಅವರಿಗಾಗಿ ಹುಡುಕಾಟ ಅರಂಭಿದ್ದಾರೆ. ಮೂವರಲ್ಲಿ ಒಬ್ಬರು ಮಹಿಳಾ ಜೂಡೊ ಪಟು ಎಂಬುದಾಗಿಯೂ ಹೇಳಲಾಗಿದೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದ್ದು, ರಾಜಕೀಯ ತಲ್ಲಣವೂ ಸೃಷ್ಟಿಯಾಗಿದೆ. ಹೀಗಾಗಿ ತವರಿಗೆ ವಾಪಸ್ ತೆರಳಲು ಬಯಸದ ಅಥ್ಲೀಟ್‌ಗಳು ಇಂಗ್ಲೆಂಡ್‌ನಲ್ಲಿಯೇ ಉಳಿಯುವ ಉದ್ದೇಶದಿಂದ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ. ಘಟನೆಯಿಂದ ಎಚ್ಚೆತ್ತಿರುವ ಸ್ಥಳೀಯ ಪೊಲೀಸರು ಉಳಿದ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ತಮ್ಮತಮ್ಮ ಪಾಸ್‌ಪೋರ್ಟ್‌ಗನ್ನು ಒಪ್ಪಿಸುವಂತೆ ಸೂಚನೆ ನೀಡಿದ್ದಾರೆ.
ಕಾಣೆಯಾದವರಲ್ಲಿ ಜೂಡೊ ಪಟು, ಕುಸ್ತಿಪಟು ಹಾಗೂ ಒಬ್ಬರು ಅಧಿಕಾರಿ ಸೇರಿದ್ದಾರೆ. ಒಟ್ಟಾರೆಯಾಗಿ ಶ್ರೀಲಂಕಾದಿಂದ ೫೧ ಸಹಾಯಕ ಸಿಬ್ಬಂದಿ ಸೇರಿ ೧೬೧ ಮಂದಿಯನ್ನು ಬರ್ಮಿಂಗ್ಹಮ್‌ಗೆ ಕಳುಹಿಸಲಾಗಿತ್ತು. ಅವರಲ್ಲಿ ಮೂವರು ಕಣ್ಮರೆಯಾಗಿದ್ದಾರೆ. ಲಂಕಾದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿರುವ ಕಾರಣ ಅಲ್ಲಿನ ಸರಕಾರಕ್ಕೆ ಅಥ್ಲೀಟ್‌ಗಳನ್ನು ಕಳುಹಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಹಾಗೂ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದ ಆಯೋಜಕರು ಜಂಟಿಯಾಗಿ ನಿಧಿ ಸಂಗ್ರಹಿಸಿ ದೊಡ್ಡ ನಿಯೋಗವನ್ನು ಕ್ರೀಡಾಕೂಟಕ್ಕೆ ಕರೆಸಿಕೊಂಡಿತ್ತು.
ಶ್ರೀಲಂಕಾದ ಅಥ್ಲೀಟ್‌ಗಳ ನಿಯೋಗದ ಮುಖ್ಯಸ್ಥರಾದ ಗೋಬಿನಾಥ್ ಶ್ರೀನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಅವರನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತದೆ ಎಂದಿದ್ದಾರೆ. ಕ್ರೀಡಾಗ್ರಾಮದಿಂದ ಕೆಲವು ಕ್ರೀಡಾಂಣಗಳಿಗೆ ಅರ್ಧಗಂಟೆಯ ಪ್ರಯಾಣವಿದೆ. ಈ ಅವಧಿಯಲ್ಲಿ ಅವರು ತಪ್ಪಿಸಿಕೊಂಡಿರಬಹುದು ಎನ್ನಲಾಗಿದೆ.
ಇಂಥ ಘಟನೆಗಳು ಸಾಮಾನ್ಯ
ಶ್ರೀಮಂತ ದೇಶಗಳಿಗೆ ಕ್ರೀಡಾಕೂಟಕ್ಕೆ ತೆರಳುವ ಬಡ ದೇಶಗಳ ಅಥ್ಲೀಟ್‌ಗಳು ಅಲ್ಲಿಯೇ ಉಳಿಯುವ ಉದ್ದೇಶದಿಂದ ಕಣ್ಮರೆಯಾಗಿರುವ ಘಟನೆಗಳು ಹಿಂದೆಯೂ ನಡೆದಿದೆ. ೨೦೧೮ರ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೋಗಿದ್ದ ಕೆಮೆರೂನ್ ದೇಶದ ಅಥ್ಲೀಟ್‌ಗಳು, ರವಾಂಡ ದೇಶದ ಕೋಚ್ ಸೇರಿ ಹಲವು ಮಂದಿ ನಾಪತ್ತೆಯಾಗಿದ್ದರು. ಬಳಿಕ ಅವರೆಲ್ಲರೂ ಆಸ್ಟ್ರೇಲಿಯಾದಲ್ಲಿಯೇ ಉಳಿಯಲು ಬಯಸಿದ್ದೇವೆ ಎಂದು ಅಲ್ಲಿನ ಸರಕಾರಕ್ಕೆ ಮನವಿ ಮಾಡಿದ್ದರು. ಒಟ್ಟಾರೆಯಾಗಿ ೨೩೦ ಅಂಥ ಮನವಿಗಳು ಬಂದಿದ್ದವು. ಆದರೆ ಅಲ್ಲಿನ ಸರಕಾರ ಅದನ್ನು ತಿರಸ್ಕರಿಸಿತ್ತು. ಅಂತೆಯೇ ಟೋಕಿಯೊ ಒಲಿಂಪಿಕ್ಸ್ ವೇಳೆ ಉಂಗಾಡದ ಅಥ್ಲೀಟ್ ಕ್ರೀಡಾಗ್ರಾಮದಿಂದ ಪರಾರಿಯಾಗಿದ್ದರು. ಸಹ ಅಥ್ಲೀಟ್ ಒಬ್ಬರಿಗೆ ಮೆಸೇಜ್ ಹಾಕಿ, ತಾವು ಜಪಾನ್‌ನಲ್ಲಿಯೇ ಉಳಿಯುವುದಾಗಿ ಹೇಳಿ, ಬುಲೆಟ್ ಟ್ರೇನ್ ಹತ್ತಿದ್ದರು. ಬಳಿಕ ಪೊಲೀಸರು ಆತನನ್ನು ಪತ್ತೆ ಹಚ್ಚಿ ವಾಪಸ್ ತವರಿಗೆ ಕಳುಹಿಸಿದ್ದರು.
ಇದನ್ನೂ ಓದಿ | CWG-2022 | ತೇಜಸ್ವಿನ್ ಶಂಕರ್‌ಗೆ ಹೈಜಂಪ್‌ನಲ್ಲಿ ಕಂಚಿನ ಪದಕ