Site icon Vistara News

Asia Cup Cricket | ಭಾರತ -ಪಾಕ್‌ ಮ್ಯಾಚ್‌ನ ಟಿಕೆಟ್‌ ಆಗಸ್ಟ್‌ 15ರಿಂದ ವಿತರಣೆ

ASIA CUP CRICKET

ದುಬೈ : ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ (Asia Cup Cricket) ಆರಂಭಕ್ಕೆ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕಾಗಿ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಈ ಪಂದ್ಯ ಸೇರಿದಂತೆ ಏಷ್ಯಾ ಕಪ್‌ ಪಂದ್ಯಗಳ ಟಿಕೆಟ್‌ ಅನ್ನು ಸೋಮವಾರದಿಂದ (ಆಗಸ್ಟ್‌ ೧೫ರಿಂದ) ವಿತರಣೆ ಮಾಡಲು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ನಿರ್ಧರಿಸಿದೆ. ಆದರೆ, ಟೂರ್ನಿಯಲ್ಲಿ ಭಾರತ ಮತ್ತು ಪಾಕ್‌ ನಡುವಿನ ಪಂದ್ಯದ ಟಿಕೆಟ್‌ಗೆ ಹೆಚ್ಚು ಬೇಡಿಕೆ ಇರಲಿದೆ.

ಏಷ್ಯಾ ಕಪ್‌ ಆಗಸ್ಟ್‌ ೨೭ರಂದು ಆರಂಭವಾಗಲಿದ್ದು, ೨೮ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ತುಂಬಿರುತ್ತವೆ. ಹೀಗಾಗಿ ಟಿಕೆಟ್‌ಗೆ ಬೇಡಿಕೆ ಜಾಸ್ತಿ. ಇದೇ ಕಾರಣಕ್ಕೆ ಯಾವುದೇ ಟೂರ್ನಿಯಲ್ಲಿ ಆರಂಭದಲ್ಲಿ ಈ ಎರಡು ದೇಶಗಳ ನಡುವಿನ ಪಂದ್ಯವನ್ನು ಅಯೋಜಿಸುತ್ತಾರೆ. ಅಂತೆಯೇ ಸೋಮವಾರದಿಂದ ಟಿಕೆಟ್‌ಗಳನ್ನು ವಿತರಣೆ ಮಾಡಲು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ನಿರ್ಧರಿಸಿದ್ದು, ಈ ಬಗ್ಗೆ ಟ್ವೀಟ್‌ ಮಾಡಿದೆ.

ಟಿ೨೦ ಮಾದರಿಯಲ್ಲಿ ನಡೆಯುವ ಈ ಬಾರಿಯ ಏಷ್ಯಾ ಕಪ್‌ಗೆ ಶ್ರೀಲಂಕಾಗೆ ಆತಿಥ್ಯ ನೀಡಲಾಗಿತ್ತು. ಆದರೆ, ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಎದುರಾಗಿದ್ದು, ದೊಡ್ಡ ಟೂರ್ನಿಯನ್ನು ಕಷ್ಟ ಎಂಬ ಕಾರಣಕ್ಕೆ ಯುಎಇಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಆತಿಥ್ಯದ ಹಕ್ಕನ್ನು ಶ್ರೀಲಂಕಾಗೆ ಉಳಿಸಲಾಗಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ತಂಡಗಳು ಟೂರ್ನಿಗೆ ನೇರ ಅರ್ಹತೆ ಪಡೆದುಕೊಂಡಿವೆ. ಯುಎಇ, ಕುವೈತ್‌, ಸಿಂಗಾಪುರ ಮತ್ತು ಹಾಂಕಾಂಗ್‌ ತಂಡಗಳ ನಡುವೆ ಅರ್ಹತಾ ಪಂದ್ಯಗಳು ಒಮನ್‌ನಲ್ಲಿ ನಡೆಯಿದ್ದು, ಆಯ್ಕೆಯಾಗುವ ತಂಡಗಳು ಪ್ರಮುಖ ಸುತ್ತಿಗೆ ಪ್ರವೇಶ ಪಡೆಯಲಿವೆ.

ಏಷ್ಯಾ ಕಪ್‌ಗೆ ಭಾರತ ತಂಡ

ರೋಹಿತ್ ಶರ್ಮ(ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಯಜ್ವೇಂದ್ರ ಚಹಲ್‌, ರವಿಚಂದ್ರನ್ ಅಶ್ವಿನ್, ಅರ್ಶ್‌ದೀಪ್‌ ಸಿಂಗ್‌, ಅವೇಶ್ ಖಾನ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್.

ಇದನ್ನೂ ಓದಿ | Asia Cup Cricket | ಏಷ್ಯಾ ಕಪ್‌ಗೆ ಆಯ್ಕೆಯಾದ ಆಟಗಾರರಿಗೆ ಶುರುವಾಗಿದೆ ಟೆನ್ಷನ್‌

Exit mobile version