ಗಯಾನಾ: ವಿಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ(maiden T20I fifty) ಬಾರಿಸಿದ ಟೀಮ್ ಇಂಡಿಯಾದ ಯುವ ಆಟಗಾರ ತಿಲಕ್ ವರ್ಮಾ(Tilak Varma) ಅವರು ತಮ್ಮ ಈ ಸ್ಮರಣೀಯ ಅರ್ಧಶತಕವನ್ನು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಪುತ್ರಿಗೆ ಅರ್ಪಿಸಿದ್ದಾರೆ.
ಭಾನುವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭಿಕ ಆಘಾತ ಕಂಡಿತು. 18 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ತಿಲಕ್ ವರ್ಮ 41 ಎಸೆತ ಎದುರಿಸಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿದರು. ಅವರ ಅರ್ಧ ಶತಕವೊಂದೇ ಭಾರತದ ಸರದಿಯ ಆಕರ್ಷಣೆ ಆಗಿತ್ತು.
ಪಂದ್ಯದ ಮುಕ್ತಾಯಕ ಬಳಿಕ ಮಾತನಾಡುವ ವೇಳೆ ತಿಲಕ್ ವರ್ಮ ಅವರು ತಮ್ಮ ಈ ಅರ್ಧಶತಕವನ್ನು ರೋಹಿತ್ ಶರ್ಮ ಅವರ ಪುತ್ರಿ ಸಮೈರಾಗೆ(Samaira) ಅರ್ಪಿಸುತ್ತೇನೆ ಎಂದಿದ್ದಾರೆ. ನನ್ನ ಮತ್ತು ಸಮೈರಾ ಮಧ್ಯೆ ಉತ್ತಮ ಬಾಂಧವ್ಯವಿದೆ. ನಾನು ಐಪಿಎಲ್ನಲ್ಲಿ ಅರ್ಧಶತಕ ಬಾರಿಸಲಿ ಅಥವಾ ಸಿಕ್ಸರ್, ಬೌಂಡರಿ ಬಾರಿಸಲಿ ಆಕೆ ಇದನ್ನು ಸಂಭ್ರಮಿಸುತ್ತಾಳೆ. ಸದಾ ನನಗೆ ಬೆಂಬಲ ಸೂಚಿಸುತ್ತಾಳೆ. ನಾನು ಅವಳಿಗೆ ಹೇಳಿದ್ದೆ ಭಾರತ ತಂಡದ ಪರ ಚೊಚ್ಚಲ ಶತಕ ಅಥವಾ ಅರ್ಧಶತಕ ಯಾವುದೇ ಬಾರಿಸಿದರು ಅದನ್ನು ನಿನಗೆ ಅರ್ಪಿಸುತ್ತೇನೆಂದು. ಇದೀಗ ಅಂದು ನಾನು ಹೇಳಿದ್ದಂತೆ ನನ್ನ ಮೊದಲ ಅರ್ಧಶತಕವನ್ನು ಸ್ಯಾಮಿಗೆ ಅರ್ಪಿಸಿದ್ದೇನೆ ಅವಳು ಇದರಿಂದ ಸಂತಸಗೊಂಡಿರುತ್ತಾಳೆ ಎಂದು ಭಾವಿಸುತ್ತೇನೆ ಎಂದರು. ಸಮೈರಾ ಕೂಡ ಚಿಯರ್ಅಪ್ ಡ್ಯಾನ್ಸ್ ಮಾಡುವ ಮೂಲಕ ತಿಲಕ್ ವರ್ಮ ಅವರ ಅರ್ಧಶತಕವನ್ನು ಸಂಭ್ರಮಿಸಿದ್ದಾಳೆ. ಈ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ ind vs wi : ವೆಸ್ಟ್ ಇಂಡೀಸ್ ವಿರುದ್ಧದ ಟಿ20ಯಲ್ಲಿ ಭಾರತ ತಂಡಕ್ಕೆ ಸತತ ಎರಡನೇ ಸೋಲು
ಡಿಸೆಂಬರ್ 30, 2018 ರಂದು ರೋಹಿತ್ ಪತ್ನಿ ರಿತಿಕಾ ಸಜ್ದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಸಮೈರಾಗೆ ಈಗ 4 ವರೆ ವರ್ಷ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ವೇಳೆಯೂ ತಿಲಕ್ ವರ್ಮ ಜತೆ ಸಮೈರಾ ತುಂಟಾಟ ಮಾಡುತ್ತಿದ್ದರು.