ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೇನ್(Tim Paine) ಅವರು ಕ್ರಿಕೆಟ್ ಬಾಳ್ವೆಗೆ ವಿದಾಯ ಘೋಷಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ವಿರುದ್ಧ “ಬೆಲ್ಲೆರೀವ್ ಓವಲ್’ನಲ್ಲಿ ನಡೆದ “ಶೆಫೀಲ್ಡ್ ಶೀಲ್ಡ್’ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಪೇನ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು.
2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸ್ಟೀವನ್ ಸ್ಮಿತ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನಿಷೇಧಕ್ಕೊಳಗಾದ ಬಳಿಕ ಟಿಮ್ ಪೇನ್ ಅವರಿಗೆ ನಾಯಕತ್ವ ವಹಿಸಲಾಗಿತ್ತು. ಆದರೆ ಇವರು ವಿವಾದವೊಂದರಲ್ಲಿ ಸಿಲುಕಿ 2021ರಲ್ಲಿ ಆಸೀಸ್ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಪ್ಯಾಟ್ ಕಮಿನ್ಸ್ ಅವರಿಗೆ ಟೆಸ್ಟ್ ತಂಡದ ನಾಯಕತ್ವ ನೀಡಲಾಗಿತ್ತು. ಟಿಮ್ ಪೇನ್ ಆಸ್ಟ್ರೇಲಿಯ ಪರ 35 ಟೆಸ್ಟ್ ಆಡಿದ್ದಾರೆ. 23 ಟೆಸ್ಟ್ ಗಳಲ್ಲಿ ನಾಯಕತ್ವ ವಹಿಸಿದ್ದಾರೆ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯಕ್ಕೆ ಕ್ಷಣಗಣನೆ
“ಈ ಪಯಣದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಅತ್ಯಂತ ಹೆಮ್ಮೆಯಿಂದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ, ನನ್ನ ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯಲು ಇಚ್ಚಿಸಿದ್ದೇನೆ. ಭವಿಷ್ಯದಲ್ಲಿ ಇದನ್ನು ಹೆಚ್ಚು ಹೆಚ್ಚು ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಟಿಮ್ ಪೇನ್ ಹೇಳಿದರು.