ಆಕ್ಲೆಂಡ್: ನ್ಯೂಜಿಲ್ಯಾಂಡ್ ಹಿರಿಯ ವೇಗಿ ಟಿಮ್ ಸೌಥಿ(Tim Southee) ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಬೆನ್ನಲೇ ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್(T20 World Cup 2024) ಗೆಲ್ಲುವುದು ಪ್ರಮುಖ ಗುರಿ ಎಂದು ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಸೌಥಿ 4 ವಿಕೆಟ್ ಕೀಳುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 150 ವಿಕೆಟ್ ಕಿತ್ತ ವಿಶ್ವದ ಮೊದಲ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
35 ವರ್ಷದ ಸೌಥಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ಎಸೆದು ಕೇವಲ 25 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಮೊದಲ ಓವರ್ನಲ್ಲಿ ಅಪಾಯಕಾರಿ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕಾರ್ ಅಹ್ಮದ್ ವಿಕೆಟ್ ಕಿತ್ತ ಸೌಥಿ ಬಳಿಕ ಚೊಚ್ಚಲ ಪಂದ್ಯವನ್ನಾಡಿದ ಅಬ್ಬಾಸ್ ಅಫ್ರಿದಿ ವಿಕೆಟ್ ಕಿತ್ತು 150ನೇ ವಿಕೆಟ್ ಪೂರ್ತಿಗೊಳಿಸಿದರು. ಅಂತಿಮ ಹಂತದಲ್ಲಿ ಹ್ಯಾರಿಸ್ ರೌಫ್ ವಿಕೆಟ್ ಉರುಳಿಸಿದರು. ಸೌಥಿಯ ಈ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಪಾಕಿಸ್ತಾನ 180 ರನ್ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು.
Tim Southee becomes the first to 150 wickets in men's T20Is 👏 pic.twitter.com/8wlpQHYsjJ
— ESPNcricinfo (@ESPNcricinfo) January 12, 2024
ಸೌಥಿ ಸದ್ಯ 118 ಟಿ20 ಪಂದ್ಯಗಳನ್ನಾಡಿ 8.11 ರ ಎಕಾನಮಿ ದರದಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದಾರೆ. 18 ರನ್ಗೆ 5 ವಿಕೆಟ್ ಪಡೆದದ್ದು ಅವರ ಗರಿಷ್ಠ ವೈಯಕ್ತಿಕ ದಾಖಲೆಯಾಗಿದೆ. ಬ್ಯಾಟಿಂಗ್ನಲ್ಲಿಯೂ ತಂಡಕ್ಕೆಎ ಆಸರೆಯಾಗಬಲ್ಲ ಅವರು ಒಟ್ಟು 294 ರನ್ ಬಾರಿಸಿದ್ದಾರೆ.
ಇದನ್ನೂ ಓದಿ ಘಾತಕ ವೇಗಿ ಶಾಹೀನ್ ಅಫ್ರಿದಿಗೆ ಸತತ ಸಿಕ್ಸರ್,ಬೌಂಡರಿ ಬಾರಿಸಿ ಚಳಿ ಬಿಡಿಸಿದ ಫಿನ್ ಅಲೆನ್
ದಾಖಲೆ ಮುಖ್ಯವಲ್ಲ
“ನಾನು ದಾಖಲೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದೇ ವರ್ಷ ನಡೆಯುವ ಟಿ20 ವಿಶ್ವಕಪ್ಗೆ ತಯಾರಿ ನಡೆಸುವುದು ನನ್ನ ಪ್ರಮುಖ ಗುರಿ. ಬಹುತೇಕ ಇದು ನನ್ನ ಕೊನಯ ಟಿ20 ವಿಶ್ವಕಪ್ ಎನಿಸಿದೆ. ಹೀಗಾಗಿ ಈ ಟೂರ್ನಿಯಲ್ಲಿ ತಂಡದವನ್ನು ಗೆಲ್ಲಿಸಲು ನಾನು ಶಕ್ತಿ ಮೀರಿ ಪ್ರಯತ್ನಿಸುವೆ” ಎಂದು ಸೌಥಿ ಪಂದ್ಯದ ಬಳಿಕ ಹೇಳಿದರು.
ಪ್ರಸಕ್ತ ಆಡುತ್ತಿರುವ ಬೌಲರ್ಗಳ ಪೈಕಿ ಶಕಿಬ್ ಅಲ್ ಹಸನ್ ಮತ್ತು ರಶೀದ್ ಖಾನ್ ಅವರಿಗೆ ಸೌಥಿ ದಾಖಲೆ ಮುರಿಯುವ ಅವಕಾಶವಿದೆ. ಅದರಲ್ಲೂ ರಶೀದ್ ಖಾನ್ಗೆ ಹೆಚ್ಚಿನ ಅವಕಾಶ ಏಕೆಂದರೆ ಅವರಿಗೆ ಈಗ 25 ವರ್ಷವಷ್ಟೆ. ಹೀಗಾಗಿ ಅವರಿಗೆ ಹೆಚ್ಚಿನ ಅವಕಾಶವಿದೆ.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು
ಟಿಮ್ ಸೌಥಿ (ನ್ಯೂಜಿಲ್ಯಾಂಡ್) – 118 ಪಂದ್ಯಗಳಲ್ಲಿ 151 ವಿಕೆಟ್
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) – 117 ಪಂದ್ಯಗಳಲ್ಲಿ 140 ವಿಕೆಟ್
ರಶೀದ್ ಖಾನ್ (ಅಫ್ಘಾನಿಸ್ತಾನ) – 82 ಪಂದ್ಯಗಳಲ್ಲಿ 130 ವಿಕೆಟ್
ಇಶ್ ಸೋಧಿ (ನ್ಯೂಜಿಲ್ಯಾಂಡ್) – 106 ಪಂದ್ಯಗಳಲ್ಲಿ 127 ವಿಕೆಟ್
ಲಸಿತ್ ಮಾಲಿಂಗ (ಶ್ರೀಲಂಕಾ) – 84 ಪಂದ್ಯಗಳಲ್ಲಿ 107 ವಿಕೆಟ್