Site icon Vistara News

ಪಾಕ್​ ಉಪಟಳಕ್ಕೆ ಗಡಿಪಾರಾದ ಆಫ್ಘನ್ನರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಜದ್ರಾನ್

Ibrahim Zadran

ಚೆನ್ನೈ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಅಫಘಾನಿಸ್ತಾನ ತಮಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟ ಇಬ್ರಾಹಿಂ ಜದ್ರಾನ್(Ibrahim Zadran) ಅವರು ಪಾಕಿಸ್ತಾನದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪಂದ್ಯದಲ್ಲಿ ತಾನು ಪಡೆದ ಪಂದ್ರಶ್ರೇಷ್ಠ ಪ್ರಶಸ್ತಿಯನ್ನು(Player Of The Match) ಪಾಕ್​ನಲ್ಲಿ ಚಿತ್ರಹಿಂಸೆ ಅನುಭವಿಸಿ ಗಡಿಪಾರಾದ ಜನತೆಗೆ ಅರ್ಪಿಸಿದ್ದಾರೆ.

ಈ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿದ ಇಬ್ರಾಹಿಂ ಜದ್ರಾನ್ ಪಾಕಿಸ್ತಾನ ಬೌಲರ್​ಗಳ ಬೆವರಿಳಿಸಿದರು. ಕ್ರೀಸ್​ಗಿಳಿದ ಆರಂಭದಿಂದಲೇ ಪಾಕ್​ಗೆ ಸೋಲುಣಿಸಬೇಕು ಎನ್ನುವ ಪಣತೊಟ್ಟಿದ್ದ ಅವರು 10 ಬೌಂಡರಿ ನೆರವಿನಿಂದ 87 ರನ್​ ಬಾರಿಸಿದರು. ಇನ್ನೇನು ಶತಕ ಬಾರಿಸಲು 13 ಬೇಕಿರುವಾಗ ಅವಸರದಲ್ಲಿ ಬ್ಯಾಟ್​ ಬೀಸಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ಅವರ ಈ ಬ್ಯಾಟಿಂಗ್​ ಸಾಹಸದಿಂದ ಆಫ್ಘನ್​ ತಂಡ 8 ವಿಕೆಟ್​ಗಳ ಗೆಲುವು ಸಾಧಿಸಿತು.

ಪಾಕ್​ನಿಂದ ಗಡಿಪಾರಾಗಿದ್ದ ಜದ್ರಾನ್

ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುವ ವೇಳೆ ಅವರು ಪಾಕಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸಿ ಅಲ್ಲಿಂದ ಗಡಿಪಾರಾದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. “ಈ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಗಡಿಪಾರಾಗಿರುವ ಎಲ್ಲ ಆಫ್ಘನ್​ ಜನತೆಗೆ ಅರ್ಪಿಸುತ್ತೇನೆ. ಈ ಗೆಲುವು ತಮಗೆ ಹಾಗೂ ತಮ್ಮ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ಮತ್ತು ಬಲ ತುಂಬಿದೆ. ಅದರಲ್ಲೂ ಪಾಕ್​ ವಿರುದ್ಧದ ಈ ಗೆಲುವು ಡಬಲ್​ ಖಷಿ ನೀಡಿದೆ” ಎಂದರು.‘ ಇಬ್ರಾಹಿಂ ಜದ್ರಾನ್ ಅವರ ಕುಟುಂಬ ಕೂಡ ಈ ಹಿಂದೆ ಪಾಕಿಸ್ತಾನದಲ್ಲಿ ಪಾಕಿಗಳ ಅಟ್ಟಹಾಸ ಮತ್ತು ಹಿಂಸೆಗೆ ಒಳಪಟ್ಟು ಅಲ್ಲಿಂದ ಗಡಿಪಾರದವರು. ಇದೇ ಬೇಸರದಲ್ಲಿ ಅವರು ಈ ಮಾತನ್ನು ಹೇಳಿದರು.

“ವಿಶ್ವಕಪ್​ನಂತಹ ದೊಡ್ಡ ಟೂರ್ನಿಯಲ್ಲಿ ನಾನು ಉತ್ತಮ ಪ್ರದರ್ಶನ ತೋರಿದ್ದಕ್ಕೆ ಆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾನು ಮೈದಾನಕ್ಕಿಳಿಯುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ದೀರ್ಘ ಸಮಯದ ಕಾಲ ಕ್ರೀಸ್‌ನಲ್ಲಿದ್ದು ರನ್ ಗಳಿಸಬೇಕೆಂದು ದೃಢ ನಿರ್ಧಾರ ಮಾಡಿ ಮೈದಾನಕ್ಕಿಳಿದೆ. ನನ್ನ ದೇಶದ ಗೆಲುವಿಗೆ ಕಿರುಕಾಣಿಕೆ ನೀಡಿದ್ದು ನಿಜಕ್ಕೂ ರೋಮಾಂಚನವೆನಿಸುತ್ತದೆ” ಎಂದು ತಿಳಿಸಿದರು.

ಗುರ್ಬಜ್​ ಪ್ರದರ್ಶನಕ್ಕೂ ಮೆಚ್ಚುಗೆ

ಉತ್ತಮ ಸಾಥ್​ ನೀಡಿದ ಜತೆಗಾರ ಗುರ್ಬಜ್​ ಪ್ರದರ್ಶನಕ್ಕೂ ಮೆಚ್ಚುಗೆ ಸೂಚಿಸಿದ ಜದ್ರಾನ್, “ಸಾಕಷ್ಟು ಬಾರಿ ನಾನು ಹಾಗೂ ಗುರ್ಬಾಜ್ ದೊಡ್ಡ ಇನಿಂಗ್ಸ್‌ ಜತೆಯಾಟವಾಡಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ನಾವು ಅಂಡರ್ 16 ಹಂತದಿಂದಲೂ ಜತೆಯಾಗಿಯೇ ಹಲವು ಪಂದ್ಯಗಳನ್ನು ಆಡಿದ್ದೇವೆ. ತಾನು ಆಡುವ ಜತೆಗೆ ಇನ್ನೊಬ್ಬ ಆಟಗಾರನ್ನು ಆಡಿಸುವ ಕಲೆ ಅವರಿಲ್ಲಿದೆ. ಹೀಗಾಗಿ ಪಾಕ್​ ವಿರುದ್ಧ ಮೊದಲ ವಿಕೆಟ್​ಗೆ ಇಷ್ಟು ರನ್ನು ಒಟ್ಟುಗೂಡಿತು” ಎಂದರು. ಗುರ್ಬಜ್ ಮತ್ತು ಜದ್ರಾನ್ ಅವರು ಮೊದಲ ವಿಕೆಟ್​ಗೆ 130 ರನ್​ ಜತೆಯಾಟ ನಡೆಸಿದರು.

ಇದನ್ನೂ ಓದಿ AFG vs PAK: ಪಾಕ್​​ ಪರಾಭವ; ಗುಂಡಿನ ಸುರಿಮಳೆಗೈದು ಸಂಭ್ರಮಿಸಿದ ಕಾಬೂಲ್​ ಜನತೆ

Exit mobile version