ಮುಂಬಯಿ: ಟೀಮ್ ಇಂಡಿಯಾದ (Team India) ಟಿ೨೦ ಮಾದರಿಯಲ್ಲಿ ಅಬ್ಬರಿಸುವ ಸೂರ್ಯಕುಮಾರ್ ಯಾದವ್ ಒಡಿಐ ಮಾದರಿಯಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ಕ್ರಿಕೆಟ್ ಕ್ಷೇತ್ರದಲ್ಲಿನ ಸದ್ಯದ ಆರೋಪ. ಟಿ೨೦ ಮಾದರಿಯಂತೆ ಏಕ ದಿನ ಮಾದರಿಯಲ್ಲೂ ಆಡಲು ಮುಂದಾಗುವ ಅವರು ಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ದುರ್ಬಲಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯಲ್ಲಿ ಅವರ ವೈಫಲ್ಯವೇ ಈ ಆರೋಪಕ್ಕೆ ಸಾಕ್ಷಿ.
ಸೂರ್ಯಕುಮಾರ್ ಯಾದವ್ ಆಕ್ಲೆಂಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಲಿಪ್‌ನಲ್ಲಿ ಆಡಂ ಮಿಲ್ನೆಗೆ ಕ್ಯಾಚಿತ್ತಿದ್ದರೆ, ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲೂ ಅದೇ ಜಾಗಕ್ಕೆ ಕ್ಯಾಚ್ ನೀಡಿ ಔಟಾಗಿದ್ದರು. ಈ ಮೂಲಕ ಏಕ ದಿನ ಮಾದರಿಗೆ ಬೇಕಾಗುವ ಸಂಯಮ ಅವರಲ್ಲಿ ಇಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಇದೇ ವಿಚಾರವಾಗಿ ಅಮೆಜಾನ್ ಪ್ರೈಮ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಕೋಚ್ ರವಿ ಶಾಸ್ತ್ರಿ, ಎರಡು ವಿಷಯಗಳನ್ನು ಅವರು ಗಮನದಲ್ಲಿ ಇಟ್ಟುಕೊಂಡರೆ ಪ್ರದರ್ಶನದಲ್ಲಿ ಸುಧಾರಣೆ ಕಾಣುತ್ತಾರೆ ಎಂಬುದಾಗಿ ಹೇಳಿದ್ದಾರೆ.
“ಏಕ ದಿನ ಮಾದರಿಯ ಕ್ರಿಕೆಟ್ ಟಿ೨೦ ಮಾದರಿಗಿಂತ ಒಂದೂವರೆ ಪಟ್ಟು ದೊಡ್ಡದಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹೀಗಾಗಿ ಹೆಚ್ಚು ಎಸೆತಗಳನ್ನು ಎದುರಿಸಲು ಅವಕಾಶಗಳು ಇರುತ್ತವೆ. ಮೊದಲ ೩೦-೪೦ ರನ್‌ಗಳನ್ನು ಗಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಬೇಕು. ಕೊನೇ ಹಂತದಲ್ಲಿ ಬಿರುಸಿನ ಆಟ ಆಡಲು ಅವರಿಗೆ ಅವಕಾಶಗಳು ಇರುತ್ತವೆ. ಇದು ಅವರು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮೊದಲ ವಿಷಯ,” ಎಂಬುದಾಗಿ ರವಿ ಶಾಸ್ತ್ರಿ ಹೇಳಿದ್ದಾರೆ.
“ಸದ್ಯ ಸೂರ್ಯಕುಮಾರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಅವಕಾಶಗಳನ್ನು ಅವರು ಸದ್ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಇದೊಂದು ಅದ್ಭುತ ಆಟ. ಆಟ ಯಾರನ್ನೂ ಕಾಯುವುದಿಲ್ಲ. ನೀವು ಪರಿಸ್ಥಿತಿಯನ್ನು ಗೌರವಿಸಿದರೆ ಅದು ನಿಮ್ಮನ್ನು ಗೌರವಿಸುತ್ತದೆ,” ಎಂಬುದಾಗಿ ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ | IND vs NZ | ಪಾಕಿಸ್ತಾನ ನಾಯಕ ಬಾಬರ್ ಅಜಮ್ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್