ತಿರುವನಂತಪುರ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 317 ರನ್ಗಳ ವಿಶ್ವ ದಾಖಲೆಯ ಅಂತರದ ವಿಜಯ ಸಾಧಿಸಿದೆ. ಈ ಗೆಲುವಿಗೆ ಭಾರತ ತಂಡದ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (ಅಜೇಯ 166 ರನ್) ಹಾಗೂ ಶುಬ್ಮನ್ ಗಿಲ್ (116 ರನ್) ಕಾರಣ. ಇವರಿಬ್ಬರ ಜತೆಗೆ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಮಿಂಚಿದ್ದಾರೆ. 10 ಓವರ್ಗಳ ಸ್ಪೆಲ್ನಲ್ಲಿ 32 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಅವರ ಮಾರಕ ಬೌಲಿಂಗ್ಗೆ ಪ್ರವಾಸಿ ಬಳಗದ ಬ್ಯಾಟರ್ಗಳು ತಲ್ಲಣಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ, ಮೊಹಮ್ಮದ್ ಸಿರಾಜ್ (Mohammed Siraj) ಟೀಮ್ ಇಂಡಿಯಾದ ಅಪರೂಪದ ಪ್ರತಿಭೆ ಎಂಬುದಾಗಿ ಕೊಂಡಾಡಿದ್ದಾರೆ.
ಲಂಕಾ ವಿರುದ್ಧದ ಸರಣಿಯಲ್ಲಿ ನಾವು ಹಲವಾರು ಋಣಾತ್ಮಕ ಅಂಶಗಳನ್ನು ಕಂಡುಕೊಂಡಿದ್ದೇವೆ. ನಾವು ಈ ಸರಣಿಯಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ಅದೇ ರೀತಿ ಬ್ಯಾಟರ್ಗಳು ಕೂಡ ಅಗತ್ಯ ಸಂದರ್ಭದಲ್ಲಿ ಬ್ಯಾಟ್ ಬೀಸಿದ್ದಾರೆ, ಎಂದು ತಂಡದ ಸದಸ್ಯರ ಸಾಹಸಕ್ಕೆ ಮೆಚ್ಚಿದ್ದಾರೆ.
ಪ್ರಮುಖವಾಗಿ ಸಿರಾಜ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅವರು ಸ್ಲಿಪ್ನಲ್ಲಿ ಪಡೆದ ವಿಕೆಟ್ಗಳೆಲ್ಲವೂ ಅರ್ಹವಾಗಿವೆ. ಅವರೊಬ್ಬ ಅಪರೂಪದ ಪ್ರತಿಭೆ. ಕಳೆದ ಕೆಲವು ವರ್ಷಗಳಿಂದ ಅವರು ಕಂಡುಕೊಂಡ ಸುಧಾರಣೆಯೇ ಅದಕ್ಕೆ ಸೂಕ್ತ ಉದಾಹರಣೆ. ಅವರು ದಿನದಿಂದ ದಿನಕ್ಕೆ ಉತ್ತಮ ಬೌಲರ್ ಆಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾದ ಪಾಲಿಗೆ ಇದು ಸಕಾರಾತ್ಮಕ ಬೆಳವಣಿಗೆ. ಮೊಹಮ್ಮದ್ ಸಿರಾಜ್ ಬಳಿ ಸಾಕಷ್ಟು ತಂತ್ರಗಳಿದ್ದು ಅದನ್ನು ಅವರು ಪ್ರಯೋಗಿಸುತ್ತಿದ್ದಾರೆ, ಎಂದು ರೋಹಿತ್ ನುಡಿದಿದ್ದಾರೆ.
ಭಾರತ ತಂಡದ ಮುಂದಿನ ಸರಣಿಯಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಜನವರಿ 18ರಂದು ಹೈದರಾಬಾದ್ನಲ್ಲಿ ಮೊದಲ ಪಂದ್ಯ ನಡೆಯಲಿದೆ.
ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನದ ಸರಣಿಯ ಗೆಲುವಿನೊಂದಿಗೆ ಬರುತ್ತಿದೆ. ಹೀಗಾಗಿ ಅ ಸರಣಿಯ ಭಾರತಕ್ಕೆ ಸವಾಲಾಗಿದೆ ಎಂಬುದಾಗಿ ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ | Mohammed Siraj | ವಿಮಾನ ಪ್ರಯಾಣದ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬ್ಯಾಗ್ ನಾಪತ್ತೆ!