Site icon Vistara News

Jhulan Goswami | ಜೂಲನ್‌ಗೆ ಇಂದು ಕೊನೇ ಅಂತಾರಾಷ್ಟ್ರೀಯ ಪಂದ್ಯ, ಇಲ್ಲಿವೆ ಕೆಲವು ದಾಖಲೆಗಳು

jhulan goswami

ಮುಂಬಯಿ : ವಿಶ್ವದ ಶ್ರೇಷ್ಠ ಮಹಿಳಾ ಕ್ರಿಕೆಟರ್‌ ಜೂಲನ್‌ ಗೋಸ್ವಾಮಿ (Jhulan Goswami) ಅವರು ಶನಿವಾರ (ಸೆಪ್ಟೆಂಬರ್‌ ೨೪) ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಅವರು ಈಗಾಗಲೇ ವಿದಾಯ ಘೋಷಿಸಿದ್ದು, ಇಂಗ್ಲೆಂಡ್‌ ಪ್ರವಾಸದಲ್ಲಿನ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ಅವರು ಆಟ ಮುಗಿಸಲಿದ್ದಾರೆ. ಸುಮಾರು ೨೦ ವರ್ಷಗಳ ಕಾಲ ಮಹಿಳೆಯರ ತಂಡದ ಕಾಯಂ ಸದಸ್ಯರಾಗಿದ್ದ ಅವರ ಕೆಲವೊಂದು ಸಾಧನೆಗಳ ಪಟ್ಟಿ ಇಲ್ಲಿದೆ.\

ಜೂಲನ್‌ ಗೋಸ್ವಾಮಿ ಅವರು ಮಹಿಳೆಯರ ಕ್ರಿಕೆಟ್‌ ವಿಭಾಗದಲ್ಲಿ ಅತ್ಯಂತ ಹೆಚ್ಚು ಏಕ ದಿನ ವಿಕೆಟ್‌ಗಳನ್ನು ಕಬಳಿಸಿದ ಸಾಧಕಿ. ೨೦೩ ಪಂದ್ಯಗಳನ್ನು ಆಡಿರುವ ಅವರು ೨೫೩ ವಿಕೆಟ್‌ ಉರುಳಿಸಿದ್ದಾರೆ.

ಜೂಲನ್‌ ಅವರು ಮಹಿಳೆಯ ಕ್ರಿಕೆಟ್‌ ವಿಶ್ವ ಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ವಿಶ್ವದ ಕ್ರಿಕೆಟ್‌ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅವರ ಖಾತೆಯಲ್ಲಿ ಒಟ್ಟು ೪೦ ವಿಶ್ವ ಕಪ್‌ ವಿಕೆಟ್‌ಗಳಿವೆ. ಆಸ್ಟ್ರೇಲಿಯಾದ ಲಿನ್‌ ಫುಲ್‌ಸ್ಟಾನ್‌ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.

ಜೂಲನ್ ಅವರು ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಬಳಿಕ ದೀರ್ಘ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ್ತಿ. ೩೯ ವರ್ಷದ ಜೂಲಾನ್ ಗೋಸ್ವಾಮಿ ಅವರು ೨೦ ವರ್ಷ ೭೫ ದಿನಗಳ ಕಾಲ ಆಡಿದ್ದಾರೆ.

ಜೂಲನ್‌ ಗೋಸ್ವಾಮಿ ಅವರು ಏಕ ದಿನ ಮಾದರಿಯಲ್ಲಿ ೧೦೦೦ ರನ್ ಬಾರಿಸಿದ್ದರಲ್ಲದೆ, ೫೦ ಕ್ಯಾಚ್‌ಗಳನ್ನೂ ಪಡೆದುಕೊಂಡಿದ್ದಾರೆ.

ಜೂಲನ್‌ ಗೋಸ್ವಾಮಿ ಅವರು ೨೦೦೬ರಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ೧೦ ವಿಕೆಟ್‌ಗಳ ಸಾಧನೆ ಮಾಡಿದ್ದರು. ಆ ವೇಳೆ ೨೩ ವರ್ಷವಾಗಿದ್ದ ಜೂಲನ್‌ ಟೆಸ್ಟ್‌ನಲ್ಲಿ ೧೦ ವಿಕೆಟ್‌ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದಿದ್ದರು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಜೂಲನ್ ಗೋಸ್ವಾಮಿ ಎಂಬ ಫೈಟಿಂಗ್ ಸ್ಪಿರಿಟ್! ಇಂದು ಚಕಡಾ ಎಕ್ಸ್‌ಪ್ರೆಸ್‌ನ ಕೊನೇ ಓಟ!

Exit mobile version