Site icon Vistara News

James Anderson: ಟೆಸ್ಟ್​ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿರುವ ಆ್ಯಂಡರ್ಸನ್​ ಯಶಸ್ಸಿಗೆ ಜಹೀರ್‌ ಖಾನ್​ ಕೂಡ ಕಾರಣವಂತೆ!

james anderson ,zaheer khan

ಧರ್ಮಶಾಲಾ: ವಯಸ್ಸು 41 ದಾಡಿದರೂ ಕೂಡ ಯುವ ಆಟಗಾರರನ್ನು ನಾಚಿಸುವಂತ ಫಿಟ್​ನೆಸ್​ ಮತ್ತು ಬೌಲಿಂಗ್​ ಕೌಶಲ್ಯ ಹೊಂದಿರುವ ಇಂಗ್ಲೆಂಡ್​ ತಂಡದ ಪ್ರಧಾನ ವೇಗಿ ಜೇಮ್ಸ್​ ಆ್ಯಂಡರ್ಸನ್​(James Anderson) ಅವರು ತಮ್ಮ ಬೌಲಿಂಗ್​ ಯಶಸ್ಸಿಗೆ ಭಾರತ ತಂಡದ ಮಾಜಿ ವೇಗಿ ಜಹೀರ್​ ಖಾನ್(Zaheer Khan)​ ಕೂಡ ಕಾರಣ ಎಂದು ಹೇಳಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಆ್ಯಂಡರ್ಸನ್​ಗೆ ಈ ಮೈಲುಗಲ್ಲು ನಿರ್ಮಿಸಲು ಇನ್ನು ಕೇವಲ 2 ವಿಕೆಟ್​ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್​ನಲ್ಲಿ(India vs England 5th Test) ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. ಭಾರತ ಪ್ರವಾಸದ ವೇಳೆಯೇ ಆ್ಯಂಡರ್ಸನ್ ಅವರು 700 ವಿಕೆಟ್​ ಸಾಧನೆ ಭಾರತದ ನೆಲದಲ್ಲೇ ಮಾಡುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಾಲ ಸನ್ನಿಹಿತವಾದಂತಿದೆ.

ಭಾರತ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ ಆ್ಯಂಡರ್ಸನ್​ ಅವರು 2 ವಿಕೆಟ್​ ಕಿತ್ತರೆ 700 ವಿಕೆಟ್‌ ಕ್ಲಬ್‌ಗ ಸೇರ್ಪಡೆಗೊಳ್ಳಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ, ದಿವಂಗತ ಶೇನ್ ವಾರ್ನ್ 700 ಟೆಸ್ಟ್​ ವಿಕೆಟ್​ ಕಿತ್ತ ಉಳಿದಿಬ್ಬರು ಆಟಗಾರರು.

ಇದನ್ನೂ ಓದಿ R Ashwin: ಧರ್ಮಶಾಲಾ ಟೆಸ್ಟ್​ನಲ್ಲಿ ಆರ್​.ಅಶ್ವಿನ್​ಗೆ ವಿಶೇಷ ಗೌರವ

700 ಟೆಸ್ಟ್ ವಿಕೆಟ್​​ ಸನಿಹದಲ್ಲಿರುವ ಆ್ಯಂಡರ್ಸನ್​ ಈ ದಾಖಲೆ ಬರೆಯವ ಮುನ್ನ ಜಹೀರ್​ ಖಾನ್​ ಅವರನ್ನು ನೆನಪಿಸಿಕೊಂಡಿದ್ದಾರೆ. “ಜಹೀರ್ ಖಾನ್ ಅವರ ಬೌಲಿಂಗ್​ ಶೈಲಿಯನ್ನು ನೋಡಿಕೊಂಡು ಬೌಲಿಂಗ್​ ಅಭ್ಯಾಸ ನಡೆಸುತ್ತಿದ್ದೆ. ನಿಜ ಹೇಳಬೇಕೆಂದರೆ ಅವರೇ ನನಗೆ ಗುರು. ಅವರ ಬೌಲಿಂಗ್​ ನೋಡಿ ಬಹಳಷ್ಟು ಕಲಿತೆ. ಅವರು ರಿವರ್ಸ್ ಸ್ವಿಂಗ್ ಮಾಡುತ್ತಿದ್ದ ರೀತಿ, ಬೌಲಿಂಗ್ ಮಾಡಲು ರನ್‌ ಅಪ್‌ ತೆಗೆದುಕೊಂಡಾಗ ಚೆಂಡನ್ನು ಮುಚ್ಚಿ ಹಿಡಿಯುತ್ತಿದ್ದ ಕೌಶಲಗಳು ನನ್ನನ್ನು ಬಹಳ ಆಕರ್ಷಿಸಿದ್ದವು. ಜಹೀರ್‌ ಜತೆ ಆಡುವ, ಅವರ ಕೆಲವು ಎಸೆತಗಳನ್ನು ಎದುರಿಸುವ ಅವಕಾಶವೂ ನನಗೆ ಸಿಕ್ಕಿತ್ತು” ಎಂದರು.

2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜೇಮ್ಸ್​ ಆ್ಯಂಡರ್ಸನ್​ ಅವರು ಇಂಗ್ಲೆಂಡ್​ ಕಂಡ ಶ್ರೇಷ್ಠ ಬೌಲರ್​ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅವರು 186 ಟೆಸ್ಟ್​ ಪಂದ್ಯ ಆಡಿ 698* ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್​ ಪಡೆದಿದ್ದಾರೆ.

ವಾರ್ನ್ ದಾಖಲೆ ಮುರಿಯುವ ಅವಕಾಶ


ಆಸ್ಟ್ರೇಲಿಯಾದ ದಿವಂಗತ ಕ್ರಿಕೆಟಿಗ ಶೇನ್​ ವಾರ್ನ್ ಅವರು ಸದ್ಯ 708 ಟೆಸ್ಟ್​ ವಿಕೆಟ್​ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಜೇಮ್ಸ್​ ಆ್ಯಂಡರ್ಸನ್​ ಅವರು ಇನ್ನು ಟೆಸ್ಟ್​ ಪಂದ್ಯಗಳಲ್ಲಿ 10 ವಿಕೆಟ್​ ಕಿತ್ತರೆ ವಾರ್ನ್​ ಅವರ ದಾಖಲೆ ಪತನಗೊಳ್ಳಲಿದೆ. ಆ್ಯಂಡರ್ಸನ್ ದ್ವಿತೀಯ ಸ್ಥಾನ ಅಲಂಕರಿಸಲಿದ್ದಾರೆ. ಆದರೆ 800 ವಿಕೆಟ್​ ಕಿತ್ತು ಅಗ್ರಸ್ಥಾನ ಪಡೆದಿರುವ ಮುತ್ತಯ್ಯ ಮುರಳೀಧರನ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯುವುದು ಕಷ್ಟ ಸಾಧ್ಯ. ಏಕೆಂದರೆ ಈಗ ದೀರ್ಘ ಕಾಲ ಟೆಸ್ಟ್​ ಪಂದ್ಯಗಳನ್ನು ಆಡುವ ಆಟಗಾರರೇ ಕಡಿಮೆ.

Exit mobile version