ಅಹಮದಾಬಾದ್: ಡೆಂಗ್ಯೂ ಜ್ವರದಿಂದ ಬಳಲಿದ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಶುಭಮನ್ ಗಿಲ್(Shubman Gill) ಅವರು ಅಹಮದಾಬಾದ್‌ಗೆ ತಲುಪಿದ್ದಾರೆ. ಅವರ ಆರೋಗ್ಯ ವಿಚಾರದಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಒಂದು ಬಾರಿ ಗಿಲ್ ಅವರು ವಿಶ್ವಕಪ್(icc world cup 2023) ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದರೆ, ಇನ್ನೊಂದು ಬಾರಿ ಗಿಲ್ ಸಂಪೂರ್ಣ ಚೇತರಿಕೆ ಕಂಡು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಇದೀಗ ಗಿಲ್ ಚೇತರಿಕೆ ಕಂಡು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಅಹಮದಾಬಾದ್ ತಲುಪಿದ್ದು ನೆಟ್ಸ್ನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ ಎನ್ನಲಾಗಿದೆ.
ಗಿಲ್ ಅವರು ಅಹಮದಾಬಾದ್ ತಲುಪಿರುವ ವಿಡಿಯೊ ವೈರಲ್ ಆಗಿದೆ. ಇತರರಿಗೆ ಸೋಂಕು ತಗುಲದಂತೆ ಮಾಸ್ಕ್ ಧರಿಸಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.
So the @ShubmanGill reached Ahemdabad ,hope he will be fine soon and deliver good news asap #WorldCup2023 pic.twitter.com/f7NC1JR1KU
— vipul kashyap (@kashyapvipul) October 11, 2023
ಬುಧವಾರ ವರದಿಯಾದ ಪ್ರಕಾರ ಶುಭಮನ್ ಗಿಲ್ ಅವರಿಗೆ ಪ್ಲೇಟ್ಲೆಟ್ ಕುಸಿದಿತ್ತು. ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದರೂ ಅವರಿಗೆ ಪದೇಪದೆ ಆರೋಗ್ಯ ಏರುಪೇರು ಕಾಣಿಸುತ್ತಿದೆ ಹೀಗಾಗಿ ಅವರು ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ವೈದ್ಯಕೀಯ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿತ್ತು. ಅಲ್ಲದೆ ಗಿಲ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಋತುರಾಜ್ ಗಾಯಕ್ವಾಡ್(ruturaj gaikwad) ಅಥವಾ ಯಶಸ್ವಿ ಜೈಸ್ವಾಲ್(yashasvi jaiswal) ಅವರನ್ನು ಆಯ್ಕೆ ಮಾಡಲಾಗುವುದು ಎಂದು ವರದಿಯಾಗಿತ್ತು.
ಆದರೆ, ಮತ್ತೆ ಬಂದ ವರದಿಯ ಪ್ರಕಾರ ಶುಭಮನ್ ಗಿಲ್ ಅವರು ಚೆನ್ನೈಯಿಂದ ಅಹಮದಾಬಾದ್‌ಗೆ ವಿಮಾನ ಏರಲಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿತ್ತು. “ಗಿಲ್ ಅವರು ಚೆನ್ನೈನಿಂದ ಅಹಮದಾಬಾದ್‌ಗೆ ಪ್ರಯಾಣಿಸಲಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ” ಎಂದು ಹೇಳಿರುವುದಾಗಿ ವರದಿಯಾಗಿತ್ತು. ಇದೀಗ ಗಿಲ್ ಅಹಮದಾಬಾದ್‌ಗೆ ತಲುಪಿದ್ದಾರೆ.
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಮೋದಿ,ಸುನಕ್
ಆರೋಗ್ಯದ ಮೇಲೆ ನಿಗಾ ಇಡಲಾಗಿದೆ
ಶುಭಮನ್ ಗಿಲ್ ಆರೋಗ್ಯದ ಕುರಿತಂತೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮಹತ್ವದ ಮಾಹಿತಿ ಹಂಚಿಕೊಂಡು “ಗಿಲ್ ತುಂಬಾ ಚೆನ್ನಾಗಿ ಗುಣಮುಖರಾಗುತ್ತಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗಿದ್ದು ನಿಜ. ಅಲ್ಲದೆ ಮುನ್ನೆಚ್ಚರಿಕಾ ಕಾರಣದಿಂದಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಸದ್ಯ ಅವರು ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ನಿಗಾದಲ್ಲಿದ್ದಾರೆ” ಎಂದು ಹೇಳಿದ್ದರು.
ಅಕ್ಟೋಬರ್ 14ಕ್ಕೆ ಇಂಡೋ-ಪಾಕ್ ಕದನ
ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಇಂಡೋ-ಪಾಕ್ ಕದನ ಅಕ್ಟೋಬರ್ 14ರಂದು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ಆಡುವ ಕುರಿತು ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಶುಕ್ರವಾರ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ.