ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್(Indian Olympic Association) ಅಧ್ಯಕ್ಷೆ ಪಿ.ಟಿ.ಉಷಾ(PT Usha) ಅವರ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ ಮತ್ತು ಗೂಂಡಾಗಿರಿ ನಡೆದಿದೆ ಎಂದು ಆರೋಪಿಸಿದ್ದು, ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್(pinarayi vijayan) ಅವರನ್ನು ಒತ್ತಾಯಿಸಿದ್ದಾರೆ. ಈ ಘಟನೆ ಶನಿವಾರ (ಫೆ 4) ನಡೆದಿದೆ.
ಬಾಲುಸ್ಸೆರಿಯಲ್ಲಿರುವ ಪಿ.ಟಿ.ಉಷಾ ಅವರ ‘ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ’ ಕಾಂಪೌಂಡ್‌ಗೆ ನುಗ್ಗಿ ಕೆಲವರು ನಿರ್ಮಾಣ ಕಾರ್ಯ ಆರಂಭಿಸಿದ್ದರು. ಮ್ಯಾನೇಜ್‌ಮೆಂಟ್ ಅವರನ್ನು ಎದುರಿಸಿದಾಗ, ಅವರು ಅನುಚಿತವಾಗಿ ವರ್ತಿಸಿದರು. ಅವರು ಪಣಂಗಾಡ್ ಪಂಚಾಯತ್‌ನಿಂದ ಅನುಮತಿ ಪಡೆದಿದ್ದಾರೆ ಎಂದು ಹೇಳಿಕೊಂಡು ನಿರ್ಮಾಣ ಕಾರ್ಯ ನಡೆಸಿದ್ದಾರೆ. ಆದರೆ ಪಂಚಾಯತ್ ಯಾವುದೇ ಅನುಮತಿ ನೀಡಿರಲಿಲ್ಲ. ಬಳಿಕ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಮತ್ತು ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಪಿ.ಟಿ ಉಷಾ ಮಾಧ್ಯಮದ ಮುಂದೆ ಹೇಳಿದ್ದಾರೆ.
ಹಲವು ಕ್ರೀಡಾಪಟುಗಳಿಗೆ ಅಲ್ಲಿ ತರಬೇತಿ ನೀಡಲಾಗುತ್ತಿದ್ದು, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಇಲ್ಲಿ ಓದುತ್ತಿರುವ ಹುಡುಗಿಯರ ಸುರಕ್ಷತೆ ನಮ್ಮ ಪ್ರಮುಖ ಕಾಳಜಿಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ Wrestlers Row: ಮೇಲುಸ್ತುವಾರಿ ಸಮಿತಿಗೆ ಬಬಿತಾ ಪೋಗಟ್ ಆಯ್ಕೆ
ಸಿಎಂಗೆ ಮನವಿ
ಇದು ಬೆಳೆಯುತ್ತಿರುವ ಸಂಸ್ಥೆಯಾಗಿದೆ. ಇಲ್ಲಿ ಮಾದಕ ವ್ಯಸನಿಗಳು ಸೇರಿದಂತೆ ಜನರು ರಾತ್ರಿಯಲ್ಲಿ ಕಾಂಪೌಂಡ್‌ಗೆ ನುಗ್ಗಿ ಕೆಲವು ಬಾರಿ ಗಲಾಟೆಯನ್ನೂ ಮಾಡಿದ್ದಾರೆ. ಈ ಬಗ್ಗೆ ಹಲವು ದೂರು ನೀಡಿದ್ದರೂ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ನಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ನಾವು ಕಾಪಾಡಿಕೊಳ್ಳಬೇಕು. ಆದ್ದರಿಂದ ಕೇರಳ ಸಿಎಂ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಪಿ.ಟಿ ಉಷಾ ಮನವಿ ಮಾಡಿದ್ದಾರೆ.