ಮೆಲ್ಬೋರ್ನ್ : ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಗ್ರಾಥ್ ಸತ್ತು ಹೋಗಿದ್ದಾರೆ ಎಂದು ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ತಮಾಷೆ ಮಾಡಲು ಹೋದ ನಿರೂಪಕಿಗೆ ಕೆಲವು ದಿನಗಳ ಕಾಲ ನಿಷೇಧ ಹೇರಲಾಗಿದೆ. ಇಂಥದ್ದೊಂದು ಹೇಳಿಕೆ ನೀಡಿದ ಟಿವಿಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತಗೊಂಡಿವೆ. ಆಸ್ಟ್ರೇಲಿಯಾದ 7ಎಸ್ ಸನ್ರೈಸ್ ಚಾನೆಲ್ನಲ್ಲಿ ಈ ವಿವಾದ ಉಂಟಾಗಿದ್ದು, ಮೈಲೀ ಹೋಗನ್ ಎಂಬ ನಿರೂಪಕಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಜತೆಗೆ ನೇರ ಪ್ರಸಾರದಿಂದಲೇ ಹೊರಕ್ಕೆ ದಬ್ಬಿಸಿಕೊಂಡಿದ್ದಾರೆ.
ಟಿವಿಯಲ್ಲಿ ಆಸ್ಟ್ರೇಲಿಯಾದ ಟಿಕ್ಟಾಕ್ ಟ್ರೆಂಡ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅವರು ಆಸ್ಟ್ರೇಲಿಯಾದಲ್ಲಿ ಸೃಷ್ಟಿಯಾಗುತ್ತಿರುವ ಜೋಕ್ಗಳಿಗೆ ಮಿತಿಯಿಲ್ಲ. ಮೆಗ್ರಾಥ್ ನಿಧನ ಹೊಂದಿದ್ದಾರೆ ಎಂಬುದು ಕೂಡ ಒಂದು ಜೋಕ್ ಎಂದು ಮೈಲೀ ಅವರು ಹೇಳಿದ್ದಾರೆ. ಮೈಲೀಯ ಈ ಮಾತು ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಇತರರಿಗೆ ಹಿಡಿಸಲಿಲ್ಲ. ತಕ್ಷಣ ನೇರ ಪ್ರಸಾರದಿಂದ ಅವರನ್ನು ಹೊರಕ್ಕೆ ದಬ್ಬಿದ್ದಾರೆ.
ಸಹ ನಿರೂಪಕರಾದ ಮಾರ್ಕ್ ಬ್ರೆಟ್ಟಾ ಹಾಗೂ ಎಡ್ವಿನ್ ಬಾರ್ಥಲೋಮಿಯೊ ಈ ತಮಾಷೆಯನ್ನು ಖಂಡಿಸಿದ್ದಾರೆ. ಇದು ತಮಾಷೆಯಲ್ಲ. ಇದು ಹುಚ್ಚುತನದ ಪರಮಾವಧಿ ಎಂದು ಹೇಳಿದ್ದಾರೆ. ಬಳಿಕ ಮೈಲೀಯನ್ನು 13 ದಿನಗಳ ಕಾಲ ರಜೆಯಲ್ಲಿ ಕಳುಹಿಸಲಾಗಿದೆ.
ಮೈಲೀ ಹೋಗನ್ ಅವರ ಸಂವೇದನಾರಹಿತ ತಮಾಷೆಗೆ ಭಾರಿ ಟೀಕೆಗಳು ವ್ಯಕ್ತಗೊಂಡಿವೆ. ಅವರನ್ನು ಟಿವಿಯಿಂದ ಬಿಟ್ಟು ಕಳುಹಿಸದೇ ಹೋದರೆ ಬಹಿಷ್ಕಾರ ಹಾಕುತ್ತೇವೆ ಎಂ ಒತ್ತಾಯಗಳೂ ಕೇಳಿ ಬಂದಿವೆ. ಒತ್ತಡಕ್ಕೆ ಮಣಿದ ಟಿವಿ ಸಂಸ್ಥೆ ಮೈಲೀ ಅವರನ್ನು ಬೆಳಗ್ಗಿನ ಕಾರ್ಯಕ್ರಮದಿಂದಲೇ ಕೈ ಬಿಟ್ಟಿದೆ. ಆದರೆ ಸೇವೆಯನ್ನು ಮುಂದುವರಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | Steve Smith | ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೋಪಿಯನ್ನೇ ಕತ್ತರಿಸಿ ಹಾಕಿದ ಇಲಿ!