ಬರ್ಮಿಂಗ್‌ಹ್ಯಾಮ್: ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ commentary ನೀಡುವ ವೇಳೆ ಬಳಸಿದ ಪದವೊಂದು ವಿವಾದಕ್ಕೆ ಕಾರಣವಾಗಿದ್ದು, ವಿರಾಟ್ ಕೊಹ್ಲಿಯ ಅಭಿಮಾನಿಗಳು ರೊಚ್ಚಿಗೆದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಸ್ತ್ರಗಳನ್ನು ಎಸೆಯುತ್ತಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಡಾನ್ಸ್ ಮಾಡಿದ್ದರು. ಈ ವೇಳೆ ಸೋನಿ ನೆಟ್ವರ್ಕ್ ಪರ ಕಾಮೆಂಟರಿ ನೀಡುತ್ತಿದ್ದ ಮೊಹಮ್ಮದ್ ಕೈಫ್ “ವಿರಾಟ್ ಕೊಹ್ಲಿ ಡಾನ್ಸ್ ಮಾಡುತ್ತಿದ್ದಾರೆ,ʼʼ ಎಂದು ಹೇಳಿದ್ದಾರೆ. ಈ ವೇಳೆ ಸೆಹ್ವಾಗ್ “ಚಮಿಯಾ ಡಾನ್ಸ್ ಕರ್ ರಹಾ ಹೈ,ʼʼ ಎಂದು ಹೇಳಿ ನಗಾಡಿದ್ದಾರೆ. ಚಮಿಯಾ ಎಂಬುದು ಹಿಂದಿಯಲ್ಲಿ ನಪುಂಸಕ ಎಂಬ ಪದಕ್ಕೆ ಸಮಾನವಾಗಿದ್ದು, ಕನ್ನಡದಲ್ಲಿ “ಮಾಮಾ ಡಾನ್ಸ್ ಮಾಡುತ್ತಿದ್ದಾನೆʼ ಎಂಬಂರ್ಥದ ಹೇಳಿಕೆಯಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಅದರಲ್ಲೂ ಕೊಹ್ಲಿ ಅಭಿಮಾನಿಗಳು ಕೆಂಡ ಕಾರುವಂತೆ ಮಾಡಿದೆ.
ಸೆಹ್ವಾಗ್ ಹಟಾವೊ
ಅಸಭ್ಯ ಪದ ಬಳಸಿದ ಸೆಹ್ವಾಗ್ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದು, ಅವರು ವೀಕ್ಷಕ ವಿವರಣೆಗಾರರ ತಂಡದಿಂದ ಕಿತ್ತೊಗೆಯಿರಿ ಎಂದು ಸೋನಿ ನೆಟ್ವರ್ಕ್‌ಗೆ ಹಕ್ಕೊತ್ತಾಯ ಮಂಡಿಸಿದ್ದಾರೆ.
ಕಾಮಾಕ್ಷಿ ಕೌಲ್ ಎಂಬುವರು ಟ್ವೀಟ್ ಮಾಡಿ “ಮೊದಲು ಸೆಹ್ವಾಗ್ ಅವರಿಗೆ ನಿಷೇಧ ಹೇರಿ. ಈ ಹಿಂದೆ ರೋಹಿತ್ ಶರ್ಮ ಅವರನ್ನು ವಡಾಪಾವ್ ಎಂದು ಕರೆದು ಬಳಿಕ ಕ್ಷಮೆ ಕೋರಿದ್ದ ಅವರೀಗ ಅಸಭ್ಯ ಪದ ಬಳಸಿದ್ದಾರೆ. ದೇಶವೇ ಅವರನ್ನು ಆಲಿಸುತ್ತಿದೆ. ಮೊದಲು ಕಿತ್ತೊಗಿಯಿರಿ,ʼʼ ಎಂದು ಬರೆದುಕೊಂಡಿದ್ದಾರೆ.
ಸಂದೀಪ್ ರತ್ನ ಎಂಬುವರು ಪ್ರತಿಕ್ರಿಯೆಸಿ, ಸೆಹ್ವಾಗ್ ಅವರ ಹೇಳಿಕೆಯನ್ನು ಗಮನಿಸಿದ್ದೀರಾ? ಆಧುನಿಕ ಕ್ರಿಕೆಟ್‌ನ ಸ್ಟಾರ್ ಆಟಗಾರನೊಬ್ಬರ ಕುರಿತು ನೀಡಬಹುದಾದ ಹೇಳಿಕೆ ಇದಾ? ಇದೊಂದು ಕಳಪೆ ದರ್ಜೆಯ ಕಾಮೆಂಟರಿಯಾಗಿದ್ದು, ಬಿಸಿಸಿಐ ಈ ಬಗ್ಗೆ ಗಮನ ಹರಿಸಬೇಕು,ʼʼ ಎಂದು ಬರೆದುಕೊಂಡಿದ್ದಾರೆ.
ಹಿಮೆನ್ ತ್ರಿವೇದಿ ಎಂಬುವರು, “ಟೆಸ್ಟ್ ಕ್ರಿಕೆಟ್ ಈ ಮಾದರಿಯ ವೀಕ್ಷಕ ವಿವರಣೆ ನೀಡುವ ಅಗತ್ಯವಿದೆಯೇ. ನಾಚಿಕೆಗೇಡು,ʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Practice Match : ಇಂಗ್ಲೆಂಡ್‌ನಲ್ಲಿ ಬೌಲರ್‌ಗಳದ್ದೇ ಕಾರುಬಾರು