ದುಬೈ: ಮುಂದಿನ ವರ್ಷದಿಂದ ಎರಡೂವರೆ ತಿಂಗಳ Indian Premier League ನಡೆಯುವ ಸಾಧ್ಯತೆಗಳು ಬಹುತೇಕ ಖಚಿತವಾಗಿದೆ. ಹೊಸ ಫ್ಯೂಚರ್ ಟೂರ್ ಪ್ರೋಗ್ರಾಮ್ಸ್ (FTP) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸಿದ್ಧಪಡಿಸಿದ್ದು, ಅದರಂತೆ ಕ್ರಿಕೆಟ್ ಋತುವಿನಲ್ಲಿ ಐಪಿಎಲ್‌ಗೂ ಸಮಯ ಮೀಸಲಿಡಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಐಪಿಎಲ್ ತಂಡಗಳ ಹೆಚ್ಚಳ ಹಾಗೂ ಪಂದ್ಯಗಳ ಸಂಖ್ಯೆಯನ್ನು ಏರಿಕೆ ಮಾಡುವ ಉದ್ದೇಶದಿಂದ ಬಿಸಿಸಿಐ ಎರಡೂವರೆ ತಿಂಗಳ ಐಪಿಎಲ್ ಆಯೋಜನೆಗೆ ಯೋಜನೆ ರೂಪಿಸಿದೆ. ಮುಂದಿನ ಐದು ವರ್ಷಗಳ ಪಂದ್ಯಗಳ ನೇರ ಪ್ರಸಾರದ ಹಕ್ಕಿನ ಹರಾಜಿನ ಬಳಿಕ ಬಿಸಿಸಿಐ ಕಾರ್ಯದರ್ಶಿ ಈ ಮಾತನ್ನು ಹೇಳಿದ್ದರು. ಈ ಪ್ರಸ್ತಾಪವನ್ನು ಬಿಸಿಸಿಐ ಮುಂದೆ ಇಡಲಾಗಿದೆ ಹಾಗೂ ಅದಕ್ಕೆ ಪೂರಕವಾಗಿ ಎಫ್‌ಟಿಪಿ ತಯಾರಿಸಲಾಗಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ.
ಮಾರ್ಚ್‌ನಿಂದ ಜೂನ್‌ವರೆಗೆ
ವೆಬ್‌ಸೈಟ್ ವರದಿ ಪ್ರಕಾರ ಮಾರ್ಚ್ ಮೊದಲ ವಾರದಿಂದ ಜೂನ್ ಮೊದಲ ವಾರದವರೆಗೆ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಐಸಿಸಿ ಆಯೋಜಿಸಿಲ್ಲ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೂ ಈ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದು, ತಮ್ಮ ಆಟಗಾರರನ್ನು ಬಳಸಿಕೊಳ್ಳುವುದಕ್ಕೆ ಸಮ್ಮತಿಸಿದೆ ಎನ್ನಲಾಗಿದೆ.
ಬಿಸಿಸಿಐನ ಈ ಯೋಜನೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಫೆಬ್ರವರಿಯಿಂದ ಮಾರ್ಚ್‌ವರೆಗಿನ ಅವಧಿಯನ್ನು ಪಾಕಿಸ್ತಾನ ಪ್ರೀಮಿಯರ್ ಲೀಗ್ ನಡೆಸಲು ಕೊಡುವಂತೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ | Indian Premier League l ಎರಡೂವರೆ ತಿಂಗಳು ಐಪಿಎಲ್ ನಡೆಯಲು ಬಿಡೆವು ಎಂದ ರಾಜಾ