Site icon Vistara News

Under 19 Womens World Cup | ಭಾರತ ತಂಡಕ್ಕೆ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಸಾರಥ್ಯ

Shafali Verma

ನವದೆಹಲಿ: ಭಾರತದ ಹಿರಿಯ ವನಿತಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ಜನವರಿಯಲ್ಲಿ ಆಡಲಾಗುವ ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌(Under 19 Womens World Cup) ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಜತೆಗೆ ಅನುಭವಿ ವಿಕೆಟ್‌ ಕೀಪರ್‌ ರೀಚಾ ಘೋಷ್‌ ಕೂಡ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಂಡರ್​-19 ಮಹಿಳಾ ಟಿ20 ವಿಶ್ವ ಕಪ್‌ ಪಂದ್ಯಾವಳಿ ಜನವರಿ 14ರಿಂದ 29ರ ತನಕ ಸಾಗಲಿದೆ. ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು ಇವನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತಿಥೇಯ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್‌ ಈ ವಿಭಾಗದ ಉಳಿದ ತಂಡಗಳಾಗಿವೆ.

ಪ್ರತೀ ಗುಂಪಿನ ಅಗ್ರ 3 ತಂಡಗಳು ಸೂಪರ್‌-6 ಸುತ್ತು ಪ್ರವೇಶಿಸಲಿವೆ. ಇಲ್ಲಿ ತಲಾ 6 ತಂಡಗಳ 2 ವಿಭಾಗಗಳನ್ನಾಗಿ ಮಾಡಿ ಸ್ಪರ್ಧೆಯನ್ನು ಮುಂದುವರಿಸಲಾಗುವುದು. ಬಳಿಕ ಪ್ರತೀ ವಿಭಾಗದ 2 ಅಗ್ರ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

18 ವರ್ಷದ ಶಫಾಲಿ ವರ್ಮ ಈಗಾಗಲೇ ಭಾರತ ಹಿರಿಯರ ಮಹಿಳಾ ತಂಡದ ಪರ 2 ಟೆಸ್ಟ್, 21 ಏಕ ದಿನ ಹಾಗೂ 46 ಟಿ20 ಸೇರಿದಂತೆ ಒಟ್ಟು 69 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇನ್ನು ರಿಚಾ ಘೋಷ್ 17 ಏಕ ದಿನ, 25 ಟಿ20 ಪಂದ್ಯಗಳು ಸೇರಿದಂತೆ 42 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಟಿ20 ವಿಶ್ವ ಕಪ್‌ ತಂಡ

ಶಫಾಲಿ ವರ್ಮ (ನಾಯಕಿ), ಶ್ವೇತಾ ಸೆಹ್ರಾವತ್‌ (ಉಪನಾಯಕಿ), ರಿಚಾ ಘೋಷ್‌, ಜಿ. ತಿೃಶಾ, ಸೌಮ್ಯಾ ತಿವಾರಿ, ಸೋನಿಯಾ , ಹರ್ಲಿ ಗಾಲಾ, ರಿಶಿತಾ ಬಸು, ಸೋನಂ ಯಾದವ್‌, ಮನ್ನತ್‌ ಕಶ್ಯಪ್‌, ಅರ್ಚನಾ ದೇವಿ, ಪರ್ಶವಿ ಚೋಪ್ರಾ, ಟಿಟಾಸ್‌ ಸಾಧು, ಫ‌ಲಕ್‌ ನಾಝ್, ಶಬ್ನಮ್‌ ಎಂ.ಡಿ.
ಮೀಸಲು ಆಟಗಾರ್ತಿಯರು: ಶಿಖಾ, ನಜ್ಲಾ ಸಿ.ಎಂ.ಸಿ., ಯಶಶ್ರೀ

Exit mobile version