ದುಬೈ: ಎಸಿಸಿ ಅಂಡರ್-19 ಪುರುಷರ ಏಷ್ಯಾ ಕಪ್(U19 Asia Cup) ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ(India U19 vs Pakistan) ತಂಡ 8 ವಿಕೆಟ್ಗಳ ಸೋಲು ಕಂಡಿದೆ. ಸತತ 2 ಗೆಲುವು ಸಾಧಿಸಿದ ಪಾಕಿಸ್ತಾನ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ಐಸಿಸಿ ಅಕಾಡೆಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ನಷ್ಟಕ್ಕೆ 260 ರನ್ ಬಾರಿಸಿತು. ದಿಟ್ಟ ರೀತಿಯಲ್ಲಿ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 2 ವಿಕೆಟ್ ಕಳೆದುಕೊಂಡು 47 ಓವರ್‌ಗಳಲ್ಲಿ 263 ರನ್ ಬಾರಿಸಿ ಗೆಲುವು ದಾಖಲಿಸಿತು. ಪಾಕಿಸ್ತಾನದ ಪರ ಅಮೋಘ ಶತಕ ಗಳಿಸಿದ ಅಜಾನ್ ಅವೈಸ್ (105*) ಗೆಲುವಿನ ರೂವಾರಿ ಎನಿಸಿದರು. ಶಹಜೇಬ್ ಖಾನ್ (63) ರನ್ ಬಾರಿಸಿ ಅವೈಸ್ಗೆ ಉತ್ತಮ ಸಾಥ್ ನೀಡಿದರು.
ಭಾರತ ತಂಡ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಸೋಲು ಕಂಡಿದೆ. ಡಿಸೆಂಬರ್ 12ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ತಂಡದ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ಮಾತ್ರ ಭಾರತ ತಂಡ ಮುಂದಿನ ಹಂತಕ್ಕೇರಲಿದೆ.
Well Done Zeeshan once again… pic.twitter.com/JhJZgeQFAu
— Salman Mahfooz (@crpian05) December 10, 2023
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಆದರ್ಶ್ ಸಿಂಗ್ (62), ನಾಯಕ ಉದಯ್ ಸಹಾರನ್ (60) ಹಾಗೂ ಸಚಿನ್ ಧಾಸ್(58) ಆಕರ್ಷಕ ಅರ್ಧಶತಕಗಳನ್ನು ಗಳಿಸಿದರು. ಅರ್ಷಿನ್ ಕುಲಕರ್ಣಿ 24 ರನ್ ಗಳಿಸಿ ಉತ್ತಮ ರನ್ ಕಲೆ ಹಾಕಿದರು. ಅದರಲ್ಲೂ 7ನೇ ಕ್ರಮಾಂಕದಲ್ಲಿ ಆಡಿದ ಸಚಿನ್ ಧಾಸ್ ಬಿರುಸಿನ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದರು. ಅವರ ಈ ಅರ್ಧಶತಕ ಇನಿಂಗ್ಸ್ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಿಡಿಯಿತು. ರುದ್ರ ಪಟೇಲ್ (1), ಮುಶೀರ್ ಖಾನ್ (2) ಬ್ಯಾಟಿಂಗ್ ವೈಫಲ್ಯ ಕಂಡರು. ಪಾಕ್ ಪರ ಬೌಲಿಂಗ್ನಲ್ಲಿ ಮೊಹಮ್ಮದ್ ಜೀಶಾನ್ ಕೇವಲ 46 ರನ್ ನೀಡಿ 4 ವಿಕೆಟ್ ಕಿತ್ತರು. ಉಳಿದಂತೆ ಆಮೀರ್ ಹಸನ್ ಮತ್ತು ಉಬೈದ್ ಶಾ ತಲಾ 2 ವಿಕೆಟ್ ಉರುಳಿಸಿದರು.
ಶತಕ ಬಾರಿಸಿದ ಅಜಾನ್ ಅವೈಸ್
ಚೇಸಿಂಗ್ ವೇಳೆ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಜಾನ್ ಅವೈಸ್ 130 ಎಸೆತ ಎದುರಿಸಿ 10 ಆಕರ್ಷಕ ಬೌಂಡರಿ ನೆರವಿನಿಂದ ಅಜೇಯ 105 ರನ್ ಬಾರಿಸಿದರು. ಪಾಕ್ ಆರಂಭ ಉತ್ತಮವಾಗಿರದಿದ್ದರೂ ದ್ವಿತೀಯ ವಿಕೆಟ್‌ಗೆ ಅವೈಸ್ ಮತ್ತು ಶಹಜೇಬ್ ಸೇರಿಕೊಂಡು 110 ರನ್‌ಗಳ ಜತೆಯಾಟ ನಡೆಸಿದರು. ಶಹಜೇಬ್ 63 ರನ್ ಬಾರಿಸಿ ಮುರುಗನ್ಗೆ ವಿಕೆಟ್ ಒಪ್ಪಿಸಿದರು.
ಮೂರನೇ ವಿಕೆಟ್‌ಗೆ ಆಡಲಿಳಿದ ನಾಯಕ ಸಾದ್ ಬೇಗ್ (68*) ಅವರು ಅವೈಸ್ ಜತೆ ಸೇರಿಕೊಂಡು ಉಪಯುಕ್ತ ಇನಿಂಗ್ಸ್ ಕಟ್ಟಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಪೈಕಿ ಅಜಾನ್ ಹಾಗೂ ನಾಯಕ ಸಾದ್ ಮುರಿಯದ ಮೂರನೇ ವಿಕೆಟ್‌ಗೆ 125 ರನ್‌ಗಳ ಜೊತೆಯಾಟ ಕಟ್ಟಿದರು.