Site icon Vistara News

U19 World Cup Final: ಆಸೀಸ್​ ಸದೆಬಡಿದು 6ನೇ ವಿಶ್ವಕಪ್​ ಗೆಲ್ಲಲಿ ಭಾರತ; ನಾಳೆ ಫೈನಲ್​

IND vs AUS

ಬೆನೋನಿ: ಭಾನುವಾರ ನಡೆಯುವ ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌(U19 World Cup 2024) ಪಂದ್ಯಾವಳಿಯ ಹೈವೋಲ್ಟೇಜ್​ ಫೈನಲ್(U19 World Cup Final)​ ಪಂದ್ಯದಲ್ಲಿ 5 ಬಾರಿಯ, ಹಾಲಿ ಚಾಂಪಿಯನ್​ ಭಾರತ ತಂಡ ಆಸ್ಟ್ರೇಲಿಯಾದ(IND vs AUS) ಸವಾಲು ಎದುರಿಸಲಿದೆ. 9ನೇ ಬಾರಿ ಫೈನಲ್​ಗೇರಿರುವ ಭಾರತ 6ನೇ ಪ್ರಶಸ್ತಿ ಮೇಲೆ, ಆಸ್ಟ್ರೇಲಿಯಾ 4ನೇ ಚಾಂಪಿಯನ್​ ಪಟ್ಟದ ಮೇಲೆ ಕಣ್ಣಿಟ್ಟಿದೆ.

ಭಾರತಕ್ಕೆ ಸೇಡಿನ ಪಂದ್ಯ


ಕಳೆದ ವರ್ಷ ನಡೆದಿದ್ದ ಹಿರಿಯರ ಏಕದಿನ ಕ್ರಿಕೆಟ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ 6ನೇ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಕಿರಿಯರು ಆ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ(U19 World Cup 2024 final). ಸದ್ಯ ಭಾರತ ತಂಡದ ಪ್ರದರ್ಶನವನ್ನು ನೋಡುವಾಗ ಕಪ್​ ಗೆಲ್ಲುವ ವಿಶ್ವಾಸವಿದೆ. ಏಕೆಂದರೆ ಭಾರತದ ಪಾಳಯದಲ್ಲಿ ಸಮರ್ಥ ಆಟಗಾರರಿದ್ದಾರೆ. ಹೀಗಾಗಿ ನಿರೀಕ್ಷೆಯೊಂದನ್ನು ಮಾಡಬಹುದು.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಇದುವರೆಗೆ 5 ಬಾರಿ ಮುಖಾಮುಖಿಯಾಗಿದೆ. ಎಲ್ಲ 5 ಪಂದ್ಯಗಳನ್ನು ಭಾರತ ಗೆದ್ದು ಬೀಗಿದೆ. ಇದರಲ್ಲಿ ಒಂದು ಫೈನಲ್​ ಪಂದ್ಯವಾಗಿದೆ. 2018ರಲ್ಲಿ ಭಾರತ ಮತ್ತು ಆಸೀಸ್​ ಫೈನಲ್ ಪಂದ್ಯದಲ್ಲಿ​ ಮುಖಾಮುಖಿಯಾಗಿತ್ತು. ಪೃಥ್ವಿ ಶಾ ನೇತೃತ್ವದ ಭಾರತ ತಂಡ ಈ ಪಂದ್ಯವನ್ನು 8 ವಿಕೆಟ್​ಗಳಿಂದ ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿತ್ತು. ಭಾರತ ಪರ ಮಂಜೋತ್ ಕಾಲ್ರಾ ಫೈನಲ್​ ಪಂದ್ಯದಲ್ಲಿ ಅಜೇಯ 101 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

ಭಾರತ ಕಿರಿಯರ ತಂಡ ಮೊದಲ ಸಲ ಅಂಡರ್‌-19 ವಿಶ್ವಕಪ್​ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು 2002 ರಲ್ಲಿ. ಮೊಹ್ಮಮದ್‌ ಕೈಫ್ ನಾಯಕತ್ವದಲ್ಲಿ ಭಾರತಕ್ಕೆ ಚೊಚ್ಚಲ ಅಂಡರ್‌-19 ವಿಶ್ವಕಪ್​ ಕಪ್ ದೊರಕಿತ್ತು. ಆ ಬಳಿಕ 2008, 2012, 2018 ಮತ್ತು 2022ರಲ್ಲಿ ಪ್ರಶಸ್ತಿ ಎತ್ತಿತ್ತು. ಈ ಬಾರಿಯೂ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್​ ತಂಡವಾಗಿ ಕಾಣಿಸಿಕೊಂಡಿದೆ.

ಭಾರತ ಉತ್ತಮ ಆಲ್‌ರೌಂಡರ್‌ಗಳನ್ನೊಳಗೊಂಡ ಸಶಕ್ತ ಪಡೆಯನ್ನು ಹೊಂದಿದೆ. ಮಹಾರಾಷ್ಟ್ರದ ಸವ್ಯ ಸಾಚಿ ಅರ್ಶಿನ್‌ ಕುಲಕರ್ಣಿ, ವಿಕೆಟ್‌ ಕೀಪರ್‌-ಬ್ಯಾಟರ್‌ ಎ. ಅವನೀಶ್‌ ರಾವ್‌, ಎಡಗೈ ಸ್ಪಿನ್ನರ್‌-ಉಪನಾಯಕ ಸೌಮಿ ಕುಮಾರ್‌ ಪಾಂಡೆ, ನಾಯಕ ಉದಯ್‌ ಸಹಾರಣ್‌, ಮುಂಬಯಿಯ ಮುಶೀರ್‌ ಖಾನ್‌, ಸಚಿನ್​ ದಾಸ್​ ಅವರೆಲ್ಲ ತಂಡದ ಸ್ಟಾರ್‌ ಬ್ಯಾಟರ್​ ಹಾಗೂ ಆಲ್‌ರೌಂಡರ್​ಗಳು. ಇವರಲ್ಲಿ ಅರ್ಶಿನ್‌ ಕುಲಕರ್ಣಿ ಮತ್ತು ಅವನೀಶ್‌ ರಾವ್‌ ಈಗಾಗಲೇ ಐಪಿಎಲ್‌ ತಂಡ ಗಳಿಂದಲೂ ಕರೆ ಪಡೆದಿದ್ದಾರೆ.

ಟೂರ್ನಿಯಲ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ಭಾರತ ತಂಡದ ಆಟಗಾರರೆ ಪಡೆದಿದ್ದಾರೆ. ಉದಯ್‌ ಸಹಾರಣ್‌(389) ಮೊದಲ ಸ್ಥಾನದಲ್ಲಿದ್ದರೆ,ಮುಶೀರ್‌ ಖಾನ್‌ (338) ಮತ್ತು ಸಚಿನ್​ ದಾಸ್​(294) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವಿಕೆಟ್​ ಟೇಕಿಂಗ್​ನಲ್ಲಿ ಸೌಮಿ ಕುಮಾರ್‌ ಪಾಂಡೆ 17 ವಿಕೆಟ್​ ಕಿತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಭಾರತ ಅಂಡರ್​ 19 ತಂಡ ಈ ಹಿಂದಿನ ತಂಡಗಳಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ವೈವಿಧ್ಯಮಯವಾಗಿದೆ. ಫೈನಲ್​ ಪಂದ್ಯದಲ್ಲಿಯೂ ಭಾರತ ಉತ್ತಮ ಪ್ರದರ್ಶನ ತೋರುವ ಮೂಲಕ 6ನೇ ಬಾಎರಿ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿ ಎನ್ನುವುದು ಭಾರತೀಯರ ಆಶಯ.

ಭಾರತ ತಂಡ


ಉದಯ್‌ ಸಹಾರಣ್‌ (ನಾಯಕ), ಅರ್ಶಿನ್‌ ಕುಲಕರ್ಣಿ, ಆದರ್ಶ್‌ ಸಿಂಗ್‌, ರುದ್ರ ಮಯೂರ್‌ ಪಟೇಲ್‌, ಸಚಿನ್‌ ದಾಸ್‌, ಪ್ರಿಯಾಂಶು ಮೋಲಿಯಾ, ಮುಶೀರ್‌ ಖಾನ್‌, ಎ. ಅವನೀಶ್‌ ರಾವ್‌, ಸೌಮ್ಯ ಕುಮಾರ್‌ ಪಾಂಡೆ, ಮುರುಗನ್‌ ಅಭಿಷೇಕ್‌, ಇನ್ನೇಶ್‌ ಮಹಾಜನ್‌, ಧನುಷ್‌ ಗೌಡ, ಆರಾಧ್ಯ ಶುಕ್ಲಾ, ರಾಜ್‌ ಲಿಂಬಾನಿ, ನಮನ್‌ ತಿವಾರಿ

Exit mobile version