ನವದೆಹಲಿ: ಭಾರತ ಆತಿಥ್ಯದಲ್ಲಿ ಮುಂದಿನ ತಿಂಗಳು ದೆಹಲಿಯಲ್ಲಿ ಆಯೋಜನೆಗೊಂಡಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಿಂದ(Women’s Boxing World Championship) ಉಕ್ರೇನ್ ಹಿಂದೆ ಸರಿದಿದೆ. ಈ ಹಿಂದೆ ಹಲವು ದೇಶಗಳು ಈ ಟೂರ್ನಿಯನ್ನು ಬಹಿಷ್ಕರಿಸಿತ್ತು. ಇದೀಗ ಈ ಪಟ್ಟಿಗೆ ಉಕ್ರೇನ್ ಕೂಡ ಸೇರ್ಪಡೆಗೊಂಡಿದೆ.
ರಷ್ಯಾ ಹಾಗೂ ಬೆಲಾರಸ್ ದೇಶದ ಬಾಕ್ಸರ್‌ಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದರಿಂದ ಉಕ್ರೇನ್ ಈ ಟೂರ್ನಿಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ. ಇದರ ಜತೆಗೆ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿಯೂ ಪಾಲ್ಗೊಳ್ಳದಿರಲು ನಿರ್ಧರಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಷ್ಯಾವೂ ಉಕ್ರೇನ್ ಮೇಳೆ ಯುದ್ದ ಸಾರಿ ಶುಕ್ರವಾರಕ್ಕೆ(ಫೆ.24) ಒಂದು ವರ್ಷ ಪೂರ್ತಿಗೊಳ್ಳಲಿದೆ. ಅದಾಗಲೇ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್, ರಷ್ಯಾ ಆಕ್ರಮಣದ ಬಳಿಕ ಮತ್ತಷ್ಟು ಸಮಸ್ಯೆಗೀಡಾಗಿದೆ. ಏಕೆಂದರೆ ಇದರ ಮುಖ್ಯಸ್ಥ ರಷ್ಯಾದ ಅಧಿಕಾರಿ ಉಮರ್ ಕ್ರೆಮ್ಲೆವ್ ಆಗಿದ್ದು, ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿಕಟವರ್ತಿ ಎಂದೇ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಉಕ್ರೇನ್ ಅಂತಿಮವಾಗಿ ಬಾಕ್ಸಿಂಗ್ ಚಾಂಪಿಯನ್ಶಿಪ್ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಚಾಂಪಿಯನ್‌ಶಿಪ್‌ನಲ್ಲಿ 74 ದೇಶಗಳ 350ಕ್ಕೂ ಹೆಚ್ಚು ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಬುಧವಾರ ಹೇಳಿತ್ತು. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈ ಚಾಂಪಿಯನ್‌ಶಿಪ್ ಅರ್ಹತಾ ಸುತ್ತಾಗಿರುವುದರಿಂದ ಕ್ರೀಡಾಪಟುಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್ ಪ್ರತಿಪಾದಿಸಿತ್ತು.