Site icon Vistara News

WPL 2024: ಕನ್ನಡತಿ ವೃಂದಾ ದಿನೇಶ್ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಉಮಾ ಚೆಟ್ರಿ ಆಯ್ಕೆ

Uma Chetry

ಭುಜದ ಗಾಯಕ್ಕೀಡಾಗಿ ಮಹಿಳಾ ಪ್ರೀಮಿಯರ್ ಲೀಗ್ 2024ರ(WPL 2024)lನಿಂದ ಹೊರಬಿದ್ದ ಕರ್ನಾಟಕ ಮೂಲಕದ ವೃಂದಾ ದಿನೇಶ್(Vrinda Dinesh) ಅವರ ಸ್ಥಾನಕ್ಕೆ ಯುಪಿ ವಾರಿಯರ್ಸ್‌(UP Warriorz) ಬದಲಿ ಆಟಗಾರ್ತಿಯನ್ನು ಆಯ್ಕೆ ಮಾಡಿದೆ. ವಿಕೆಟ್ ಕೀಪರ್-ಬ್ಯಾಟರ್ ಉಮಾ ಚೆಟ್ರಿಯನ್ನು(Uma Chetry) ಮುಂದಿನ ಪಂದ್ಯಗಳಿಗಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಬದಲಿ ಆಟಗಾರ್ತಿಯ ನೇಮಕವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪ್ರಕಟಿಸಿದೆ.

ಮಿನಿ ಹರಾಜಿನಲ್ಲಿ 1.30 ಕೋಟಿಗೆ ವೃಂದಾ ದಿನೇಶ್ ಅವರನ್ನು ಯುಪಿ ವಾರಿಯರ್ಸ್‌ ಖರೀದಿ ಮಾಡಿತ್ತು. ಆದರೆ, ಕಳೆದ ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್​ ಮಾಡುವ ವೇಳೆ ವೃಂದಾ ಭಜದ ಗಾಯಕ್ಕೆ ತುತ್ತಾಗಿದ್ದರು. ಗಾಯದ ಪ್ರಮಾಣ ಗಂಭೀರವಾದ ಕಾರಣ ಅವರು ಟೂರ್ನಿಯಿಂದ ಹೊರಗುಳಿಯಬೇಕಾಯಿತು.

ವೃಂದಾ ದಿನೇಶ್ ಈ ಬಾರಿ ಮೂರು ಪಂದ್ಯಗಳನ್ನು ಆಡಿದ್ದರು. ಆರ್​ಸಿಬಿ ವಿರುದ್ಧ ಆಡಿದ ಚೊಚ್ಚಲ ಪಂದ್ಯದಲ್ಲಿ 18 ರನ್ ಬಾರಿಸಿದ್ದ ಅವರು ಡೆಲ್ಲಿ ಎದುರಿನ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಮುಂಬೈ ಎದುರಿನ ಮೂರನೇ ಪಂದ್ಯದಲ್ಲಿ ಗಾಯದಿಂದಾಗಿ ಬ್ಯಾಟಿಂಗ್​ ನಡೆಸಿರಲಿಲ್ಲ. ಬೆಂಗಳೂರಿನವರದಾದ ವೃಂದಾ ದಿನೇಸ್​ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪುವಲ್ಲಿ ವೃಂದಾ ಪ್ರಮುಖ ಪಾತ್ರ ವಹಿಸಿದ್ದರು. 11 ಇನ್ನಿಂಗ್ಸ್‌ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದ್ದರು. ವೃಂದಾ ಇತ್ತೀಚೆಗಷ್ಟೇ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ; ಅಸಮಾಧಾನ ಹೊರಹಾಕಿದ ಯುಪಿ ತಂಡ

ಬದಲಿ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್​ ಸೇರಿದ 21 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಉಮಾ ಚೆಟ್ರಿ ಇತ್ತೀಚೆಗೆ ಇಂಗ್ಲೆಂಡ್ ಎ ವಿರುದ್ಧದ ಭಾರತ ಎ ಪರ ಆಡಿದ್ದರು. ಎಸಿಸಿ ಉದಯೋನ್ಮುಖ ಮಹಿಳೆಯರ ಏಷ್ಯಾ ಕಪ್ 2023 ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅವರನ್ನು ಮೀಸಲು ಬೆಲೆ 10 ಲಕ್ಷ ರೂಪಾಯಿಗೆ ಯುಪಿ ತಂಡ ಖರೀದಿ ಮಾಡಿದೆ.

ಆರ್​ಸಿಬಿ ವಿರುದ್ಧ ಸೋತ ಯುಪಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ  ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ತಂಡ(Royal Challengers Bangalore) ಯುಪಿ ವಾರಿಯರ್ಸ್(UP Warriorz) ಎದುರು 23 ರನ್​ಗಳ ಗೆಲುವು ಸಾಧಿಸಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸಂಪೂರ್ಣ ಜೋಶ್​ನಿಂದ ಬ್ಯಾಟಿಂಗ್​ ನಡೆಸುವ ಮೂಲಕ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಒಂದು ಹಂತದವರೆಗೆ ದಿಟ್ಟ ಹೋರಾಟ ನಡೆಸಿ ಆ ಬಳಿಕ ಕುಸಿತ ಕಂಡು ನಿಗದಿತ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 175 ರನ್​ ಗಳಿಸಲಷ್ಟೇ ಶಕ್ತವಾಯಿತು.

Exit mobile version