ಮುಂಬಯಿ: ಇಂಗ್ಲೆಂಡ್(IND vs ENG) ವಿರುದ್ಧದ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟದ ಬೆನ್ನಲ್ಲೇ ಹಿರಿಯ ವೇಗಿ ಉಮೇಶ್ ಯಾದವ್(Umesh Yadav) ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಪ್ರಸಕ್ತ ಸಾಗುತ್ತಿರುವ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸುತ್ತಿರುವ ಉಮೇಶ್ ಯಾದವ್ ಅವರು ಅನಿಭವಿ ವೇಗಿಗಳ ಅಲಭ್ಯತೆಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಬಿಸಿಸಿಐ ಯುವ ಅನಾನುಭವಿ ಬೌಲರ್ಗಳಿಗೆ ಅವಕಾಶ ನೀಡಿತ್ತು. ಇದರಿಂದ ಬೇಸರಗೊಂಡ ಯಾದವ್, ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಪುಸ್ತಕದ ಮೇಲೆ ಧೂಳು ಕೂತರೆ, ಆ ಪುಸ್ತಕದಲ್ಲಿರುವ ಕಥೆ ಮುಗಿಯಿತು ಎಂದು ಅರ್ಥವಲ್ಲ” ಎಂದು ಪೋಸ್ಟ್ ಮಾಡುವ ಮೂಲಕ ತಮ್ಮನ್ನು ಕಡೆಗಣಿಸಿದ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅವರ ಈ ಪೋಸ್ಟ್ನ ಒಳಾರ್ಥವೆಂದರೆ, ಕೆಲವು ಒಬ್ಬ ಆಟಗಾರ ಒಮ್ಮೆ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಬಿದ್ದರೆ, ಆತನಲ್ಲಿ ಇನ್ನು ಸಾಮರ್ಥ್ಯವಿಲ್ಲ ಎಂದು ತಿಳಿದುಕೊಳ್ಳವುದು ತಪ್ಪು ಎನ್ನುವುದು.
ಇದನ್ನೂ ಓದಿ IND vs ENG: ಕೊನೆಗೂ ಭಾರತ ತಂಡ ಪ್ರಕಟ; ವಿರಾಟ್ ಕೊಹ್ಲಿ ಸರಣಿಯಿಂದಲೇ ಔಟ್
ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿರುವ ಉಮೇಶ್ ಯಾದವ್ ಕಳೆದ ವರ್ಷ ಲಂಡನ್ನಲ್ಲಿ ನಡೆದಿದ್ದ ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಬಳಿಕ ಅವರನ್ನು ಯಾವುದೇ ಸರಣಿಗೂ ಆಯ್ಕೆ ಮಾಡಿಲ್ಲ.
36 ವರ್ಷದ ಉಮೇಶ್ ಯಾದವ್ ಅವರು ಭಾರತ ಪರ ಇದುವರೆಗೆ 57 ಟೆಸ್ಟ್ ಪಂದ್ಯಗಳನ್ನು ಆಡಿದ್ದು 170 ವಿಕೆಟ್ ಕಿತ್ತಿದ್ದಾರೆ. 3 ಬಾರಿ ಐದು ವಿಕೆಟ್ ಗೊಂಚಲು ಮತ್ತು 1 ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 75 ಪಂದ್ಯಗಳನ್ನಾಡಿ 106 ವಿಕೆಟ್ ಪಡೆದಿದ್ದಾರೆ. 9 ಟಿ20 ಪಂದ್ಯಗಳಿಂದ 12 ವಿಕೆಟ್ ಉರುಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 370 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ರಾಜ್ಕೋಟ್ನಲ್ಲಿ ಆರಂಭಗೊಳ್ಳಲಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈ ಸರಣಿಯಿಂದ ಹಿಂದೆ ಸರಿದಿದ್ದಾರೆ. ಮೊಹಮ್ಮದ್ ಶಮಿ ಗಾಯದಿಂದಾಗಿ ಆಯ್ಕೆಯಾಗಿಲ್ಲ. ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಮಾತ್ರ ತಂಡದಲ್ಲಿರುವ ಅನುಭವಿ ವೇಗಿಗಳು.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.