ನವದೆಹಲಿ: ತಂದೆಯ ನಿಧನದ ದುಃಖದಲ್ಲಿಯೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನಾಡಿದ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಅವರಿಗೆ (Umesh Yadav) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಪ್ರೇರಣೆಯ ಮಾತುಗಳ ಜತೆಗೆ ದೈರ್ಯ ತುಂಬಿದ್ದಾರೆ.
ಇಂದೋರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ (Tilak Yadav) ಅನಾರೋಗ್ಯದಿಂದ ನಿಧನರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಿಲಕ್ ಯಾದವ್ ಅವರು ಫೆಬ್ರವರಿ 22ರಂದು ಕೊನೆಯುಸಿರೆಳೆದಿದ್ದರು. ಈ ದುಃಖದ ನಡುವೆಯೂ ಉಮೇಶ್ ಯಾದವ್ ಟೀಮ್ ಇಂಡಿಯಾ ಪರ ಆಡಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಈ ಪಂದ್ಯದಲ್ಲಿ ಅವರು ಒಟ್ಟು ಮೂರು ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ IND VS AUS: ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ಸ್ ಕೊಟ್ಟ ಐಸಿಸಿ
ಉಮೇಶ್ ಯಾದವ್ ಅವರ ತಂದೆಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮೋದಿ, ಕ್ರಿಕೆಟ್ ಜಗತ್ತಿನಲ್ಲಿ ನಿಮ್ಮ ಇದುವರೆಗಿನ ಪ್ರಯಾಣದಲ್ಲಿ ನಿಮ್ಮ ತಂದೆಯ ತ್ಯಾಗ ಮತ್ತು ಸಮರ್ಪಣೆ ದೊಡ್ಡ ಪಾತ್ರವನ್ನು ವಹಿಸಿದೆ. ಅವರು ನಿಮ್ಮ ಪ್ರತಿ ನಿರ್ಧಾರದಲ್ಲೂ ವಿಶ್ವಾಸ ವ್ಯಕ್ತಪಡಿಸುತ್ತಾ ನಿಮ್ಮ ಬೆಂಬಲಕ್ಕೆ ನಿಂತವರು. ಅವರು ನಿಮ್ಮಿಂದ ದೂರವಾದರೂ ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ ಎಂದು ಪ್ರಧಾನಿ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರವನ್ನು ಉಮೇಶ್ ಯಾದವ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.